ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಲು ಒತ್ತಾಯ

ಕಲಬುರಗಿ:ಜ.23: ನಗರದ ಸೂಪರ್ ಮಾರ್ಕೆಟ್‍ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯ ಎದುರು ಇರುವ ಸಿಟಿ ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರು ನಾಮಕರಣ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಗುರುನಾಥ್ ಪೂಜಾರಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಸ್ವಾತಂತ್ರ್ಯ ಸೇನಾನಿ, ಅಪ್ರತಿಮ ದೇಶಭಕ್ತ. ಕನ್ನಡ ನಾಡಿನ ಮಾನ, ಪ್ರಾಣ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದು, ಅವರ ಹೆಸರನ್ನು ಸಿಟಿ ಬಸ್ ನಿಲ್ದಾಣಕ್ಕೆ ಇಡುವ ಮೂಲಕ ಗೌರವ ಸೂಚಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಸಿಟಿ ಬಸ್ ನಿಲ್ದಾಣದ ಬಳಿಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಬಸ್ ನಿಲ್ದಾಣಕ್ಕೂ ಅವರ ಹೆಸರು ಇಡುವ ಮೂಲಕ ಬೇಡಿಕೆಯನ್ನು ಸಾಕಾರಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ ಆಲಗೂಡ್, ರವಿ ಪೂಜಾರಿ, ಬೀರಲಿಂಗ್ ಇಟಗಾ, ಬಂಗಾರೆಪ್ಪ ಬ. ಆಡಿನ್ ಮುಂತಾದವರು ಉಪಸ್ಥಿತರಿದ್ದರು.