ಸೂತಕದಿಂದ ಜನೋತ್ಸವ ರದ್ದು : ಜ್ಞಾನೇಂದ್ರ

ಬೆಂಗಳೂರು, ಜು. ೨೮- ಸೂತಕದ ಮನೆಯಲ್ಲಿ ಏನೂ ಮಾಡಬಾರದು ಅದಕ್ಕಾಗಿ ಮುಖ್ಯಮಂತ್ರಿಗಳು ಜನೋತ್ಸವ ಸೇರಿದಂತೆ ಎಲ್ಲ ರೀತಿಯ ಸಾಧನಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಹತ್ಯೆಯಾ ಪ್ರವೀಣ್ ನಮ್ಮ ಸಂಘಟನೆಗೆ ಅತ್ಯಂತ ಅಮೂಲ್ಯವಾದ ಆಸ್ತಿ. ಅವನನ್ನು ಕಳೆದುಕೊಂಡ ದುಃಖ, ಆಕ್ರೋಶ ಇದ್ದೇ ಇದೆ. ಒಂದು ರೀತಿಯ ಸೂತಕದ ವಾತಾವರಣ ಇದೆ. ಹೀಗಿರುವಾಗ ಜನೋತ್ಸವ ಬೇಡ ಎಂಬ ತೀರ್ಮಾನವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದರು.
ಹತ್ಯೆಯಾದ ಪ್ರವೀಣ್ ಮನೆ ಕೇರಳ ಗಡಿಯಲ್ಲೇ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ೧೫ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದರು.