ಸೂಕ್ತ ಸ್ಥಾನ ಮಾನಕ್ಕೆ ಭೋವಿ, ಕೊರಮ ಸಮಾಜ ಒತ್ತಾಯ

ನೆಲಮಂಗಲ, ಏ. ೧೦- ರಾಜ್ಯದಲ್ಲಿ ಬೋವಿ ಮತ್ತು ಕೊರಮ ಸಮಾಜಕ್ಕೆ ಸಲ್ಲಬೇಕಾದ ರಾಜಕೀಯ ಸ್ಥಾನಮಾನಗಳ ಸಹಿತ ಬರಲಿರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನಾಗಿಸಲು ವಿವಿಧ ಪಕ್ಷಗಳು ಮೀನಾಮೇಷ ಎಣಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಭೋವಿ(ವಡ್ಡರ)ಸಂಘ ಮತ್ತು ಹಲವು ಜನಾಂಗದ ಪ್ರಮುಖರುಗಳು ನೆಲಮಂಗಲದಲ್ಲಿ ಭಾನುವಾರ ಸಂಜೆ ಪಂಜಿನ ಮೆರವಣಿಗೆಯನ್ನು ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ತಮ್ಮ ಸಮುದಾಯಕ್ಕೆ ಸೂಕ್ತ ಚುನಾವಣಾ ಸ್ಥಾನಗಳನ್ನು ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಭೋವಿ ಸಂಘದ ಪ್ರಧನ ಕಾರ್ಯದರ್ಶಿ ಡಾ.ಚೌಡಯ್ಯ ಒತ್ತಾಯಿಸಿದರು.
ನಗರದ ತಾಲ್ಲೂಕು ಪಂಚಾಯ್ತಿಯಿಂದ ತಾಲ್ಲೂಕು ಕಛೇರಿಯವರೆಗೂ ಪ್ರತಿಭಟನಾಕಾರರು ಪಂಜಿನ ಮೆರವಣಿಗೆ ನಡೆಸಿದರು. ಬರೀ ಭೋವಿ ಸಮುದಾಯದವರು ಮಾತ್ರವಲ್ಲ ಕೊರಚರು, ಕೊರಮರು ಸೇರಿ ವಿವಿಧ ಕೆಳಸ್ತರದ ಸಮುದಾಯದ ಪ್ರಮುಖರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.
ನೆಲಮಂಗಲದಲ್ಲಿ ಈಗಾಗಲೇ ಟಿಕೇಟ್ ಕೈತಪ್ಪಿರುವ ಭೋವಿ ಸಮುದಾಯಕ್ಕೆ ಸೇರಿದ ಕಾಂಗ್ರೇಸ್ ಪಕ್ಷದ ಉಮಾದೇವಿ ಅವರಿಗೆ ಈ ಬಾರಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯನ್ನಾಗಿಸಬೇಕು. ಅಂತೆಯೇ ಬೆಂಗಳೂರು ಪುಲಕೇಶಿನಗರದ ಶಾಸಕರಾಗಿರುವ ಅಖಂಡ ಆರ್.ಶ್ರೀನಿವಾಸಮೂರ್ತಿ ಅವರಿಗೆ ಕಾಂಗ್ರೇಸ್ ಟಿಕೇಟನ್ನು ಘೋಷಿಸಲು ವಿಳಂಬ ನೀತಿಯನ್ನು ಖಂಡಿಸಿ ಕೂಡಲೇ ಸಮುದಾಯದ ಟಿಕೇಟನ್ನು ನೀಡುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ಸದಾಶಿವ ಆಯೋಗ ವರದಿಯನ್ನು ಖಂಡಿಸಿ ಪಂಜಿನ ಮೆರವಣಿಗೆಯನ್ನು ನಡೆಸಿದರು.
ಹಿರಿಯ ಕಾಂಗ್ರೆಸ್ ಮುಖಂಡ ಮಾಕಳಿರವಿ, ನಗರಸಭಾ ಸದಸ್ಯ ಸುನೀಲ್ ಮೂಡ್, ಸಮುದಾಯದ ರಾಜಣ್ಣ, ಅರುಣ್, ಡಾ.ಚೌಡಯ್ಯ, ಗೋಪಿ, ಮಾಜಿಪುರಸಭಾ ಸದಸ್ಯ ರವಿ, ಮಾಜಿಜಿಪಂ ಸದಸ್ಯ ಹನುಮಂತಯ್ಯ ಸೇರಿದಂತೆ ಹಲವಾರು ಮಹಿಳಾ ಪ್ರಮುಖರುಗಳಿದ್ದರು.