ಸೂಕ್ತ ಪರಿಹಾರ ನೀಡಿ ಅನಂತರ ರಸ್ತೆ ಕಾಮಗಾರಿ ಆರಂಭಿಸಿ: ರೈತರ ಆಕ್ರೋಶ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.29: ಸೂಕ್ತ ಪರಿಹಾರ ನೀಡಿ ಅನಂತರ ರಸ್ತೆ ಕಾಮಗಾರಿ ಆರಂಭಿಸಿ. ವೈಜ್ಞಾನಿಕ ಪರಿಹಾರ ನೀಡುವವರೆಗೂ ನಾವು ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಗಾಗಿ ಭೂಮಿ ಕಳೆದುಕೊಂಡಿರುವ ರೈತರು ಪಟ್ಟುಹಿಡಿದು ತಮ್ಮ ಆಕ್ರೊಶ ಹೊರಹಾಕಿದರು.
ಬೆಂಗಳೂರು-ಜಲಸೂರು ಹೆದ್ದಾರಿಗಾಗಿ ಪಟ್ಟಣದ ಹೊರವಲಯದ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಸುಮಾರು 221 ಜನ ರೈತರ 31 ಎಕರೆ 17 ಗುಂಟೆಯಷ್ಟು ಜಮೀನನ್ನು ಕೆಶಿಪ್ ವಶಕ್ಕೆ ಪಡೆದಿದೆ. ಈ ಬೈಪಾಸ್ ಹೆದ್ದಾರಿ ಪಟ್ಟಣದ ಹೊರವಲಯದಲ್ಲಿ ಸುಮಾರು 8.7 ಕೀ.ಮೀ ಹಾದುಹೋಗಲಿದೆ. ಈ ವ್ಯಾಪ್ತಿಯ ರೈತರ ಜಮೀನನ್ನು ಕೆಶಿಪ್ ರಸ್ತೆ ನಿರ್ಮಾಣಕ್ಕಾಗಿ ಕೆಲವೆಡೆ ಭೂಸ್ವಾಧೀನ ಮಾಡಿಕೊಂಡಿದ್ದರೆ ಮತ್ತೆ ಕೆಲವೆಡೆ ರೈತರಿಂದ ನೇರ ಖರೀದಿ ಮಾಡಿದೆ. ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದೆಯಲ್ಲದೆ ಭೂಮಿ ಖರೀದಿಯಲ್ಲಿಯೂ ಅಧಿಕಾರಿಗಳು ರೈತರಿಂದ ರೈತರಿಗೆ ತಾರತಮ್ಯ ಮಾಡಿದ್ದಾರೆ ಎನ್ನುವುದು ರೈತರ ಆರೋಪ. ಈ ಹಿನ್ನೆಲೆಯಲ್ಲಿ ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಪಾಂಡವಪುರ ಉಪ ವಿಭಾಗಧಿಕಾರಿಗಳ ಸಮ್ಮುಖದಲ್ಲಿ ರೈತರು ಮತ್ತು ಕೆಶಿಪ್ ಎಂಜಿನಿಯರುಗಳ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಉಪ ವಿಭಾಗಧಿಕಾರಿ ನಂದೀಶ್ ರಸ್ತೆ ನಿರ್ಮಾಣಕ್ಕಾಗಿ ಕೆಶಿಪ್ ರೈತರಿಂದ ನೇರವಾಗಿ ಭೂಮಿ ಖರೀದಿಸಿದೆ. ಖರಿದಿಸಿದ ಭೂಮಿ ಈಗಾಗಲೇ ಕೆಶಿಪ್ ವಶದಲ್ಲಿದೆ. ನಿಯಮಾನುಸಾರ ಒಂದು ಭೂಮಿಗೆ ಎರಡೆರಡು ರೀತಿಯಲ್ಲಿ ಪರಿಹಾರ ನೀಡಿಕೆ ಸಾಧ್ಯವಿಲ್ಲ.ನಿಮ್ಮ ಅಹವಾಲು ಸಲ್ಲಿಕೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಮುಂದೆ ನಿಮ್ಮ ಅಹವಾಲುಗಳನ್ನು ಮಂಡಿಸಲಾಗುವುದೆಂದರು. ಉಪ ವಿಭಾಗಧಿಕಾರಿಗಳ ಮಾತಿನಿಂದ ಆಕ್ರೋಶಗೊಂಡ ರೈತರು ಒಮ್ಮೆ ಖರೀದಿಯಾದ ಭೂಮಿಗೆ ಮತ್ತೊಮ್ಮೆ ಪರಿಹಾರ ನೀಡಿಕೆ ಸಾಧ್ಯವಿಲ್ಲ ಎನ್ನುವುದಾದರೆ ಪರಿಶೀಲನಾ ಸಮಿತಿಯನ್ನು ರಚಿಸಿದ್ದಾದರೂ ಏಕೆ? ರೈತರಿಗೆ ತಾಂತ್ರಿಕ ಕಾರಣ ನೀಡಿ ನಿಮ್ಮ ಅಧಿಕಾರ ದುರ್ಭಳಕೆ ಮಡಿಕೊಂಡು ರೈತರಿಂದ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ಭೂಮಿ ಖರೀದಸಿ ವಂಚಿಸಿದ್ದೀರಿ. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರ ಬದುಕಿನ ಮೇಲೆ ಬರೆ ಎಳೆಯುವುದು ಬೇಡ. ರಸ್ತೆ ಕಾಮಗಾರಿಗೆ ರೈತರ ವಿರೋಧವಿಲ್ಲ. ಆದರೆ ನಮಗೆ ನ್ಯಾಯಯುತ ಪರಿಹಾರ ನೀಡಿ. ಅದನ್ನು ಬಿಟ್ಟು ಪೆÇಲೀಸರ ಮೂಲಕ ದಬ್ಬಾಳಿಕೆ ನಡೆಸಿ ಬಲವಂತದಿಂದ ರಸ್ತೆ ಕಾಮಗಾರಿ ಆರಂಭಿಸಿದರೆ ನಾವು ಸಾಮೂಹಿಕವಾಗಿ ವಿಷ ಸೇವನೆ ಮಾಡುತ್ತೇವೆ. ನಮ್ಮ ಬದುಕು ಬೀದಿಗೆ ಬಂದಿದೆ. ನಾವು ಬೀದಿಯಲ್ಲಿಯೇ ಸಾಯುತ್ತೇವೆ. ನಾವು ಕಾನೂನು ಕೈಗೆ ತೆಗೆದುಕೊಳ್ಳುವುದಿಲ್ಲ. ನೀವು ಬಂದೂಕು, ಲಾಠಿ ತಂದರೆ ನಾವು ಸೀಮೆ ಎಣ್ಣೆ ಮತ್ತು ಪೆಟ್ರೋಲ್ ಕ್ಯಾನ್ ತರುತ್ತೇವೆ. ನಿಮ್ಮ ಮುಂದೆಯೇ ಬೆಂಕಿ ಹಚ್ಚಿಕೊಂಡು ಸಾಯುತ್ತೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಮುದಾಯದ ಪರವಾಗಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ತಾಲೂಕಿನ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆಯ ಪೈಪ್ ಲೈನ್ ಕಾಮಗಾರಿಗೆ ರೈತರ ಭೂಮಿಯ ಮೂರು ಅಡಿ ಆಳದಲ್ಲಿ ಪೈಪ್ ಲೈನ್ ಮಾಡಲಾಗಿದೆ. ಇಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಭೂಮಿಯ ಆಳದಲ್ಲಿ ಪೈಪ್ ಲೈನ್ ತೆಗೆದುಕೊಂಡು ಹೋಗಿದ್ದರೂ ಇಲ್ಲಿ ರಾಜ್ಯ ಸರ್ಕಾರ ಪೈಪ್ ಲೈನ್ ಗೆ ಭೂ ಅನುಮತಿ ನೀಡಿದ ರೈತರಿಗೆ ಪ್ರತಿಗುಂಟೆಗೆ 63 ಸಾವಿರ ರೂ ಪರಿಹಾರ ನೀಡಿದೆ. ಆದರೆ ಕೆಶಿಪ್ ಪಟ್ಟಣ ವ್ಯಾಪ್ತಿಯ ರೈತರಿಗೆ ಒಬ್ಬರಿಗೆ 20 ಸಾವಿರ, ಮತ್ತೊಬ್ಬರಿಗೆ 1 ಲಕ್ಷದವರೆಗೆ ಪ್ರತಿ ಗುಂಟೆಗೆ ಭೂ ಪರಿಹಾರ ನೀಡಿದೆ. ಇದು ಯಾವ ಮಾನದಂಡದ ಮೇಲೆ ಆಗಿದೆ?. ಇದನ್ನು ಯಾರೂ ಒಪ್ಪಲು ಸಧ್ಯವಿಲ್ಲ. ಇಲ್ಲಿನ ರೈತರ ಸಮಸ್ಯೆ ಸರ್ಕಾರದ ಗಮನಕ್ಕೆ ಬಂದಿದೆ. ಅದನ್ನು ಗಮನಿಸಿಯೇ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ರೈತರ ಕುಂದು ಕೊರತೆ ಸಮಿತಿಯನ್ನು ರಚಿಸಿದ್ದಾರೆ. ರೈತರ ಅಹವಾಲನ್ನು ಮಾನವೀಯತೆಯ ನೆಲಗಟ್ಟಿನಲ್ಲಿ ಪರಿಶೀಲಿಸುವಂತೆ ಮನವಿ ಮಾಡಿದರು.
ರೈತರ ಅಹವಾಲುಗಳನ್ನು ಜಿಲ್ಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ ಉಪ ವಿಭಾಗಧಿಕಾರಿ ನಂದೀಶ್ ರೈತರಿಂದ ಮನವಿ ಪತ್ರ ಸ್ವೀಕರಿಸಿದರು.
ತಹಸೀಲ್ದಾರ್ ನಿಸರ್ಗಪ್ರಿಯ, ಕೆಶಿಪ್ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಸಹಾಯಕ ಎಂಜಿನಿಯರ್ ಶಿವರಾಜು, ಪೆÇಲೀಸ್ ನಿರೀಕ್ಷಕ ಎಂ.ಕೆ.ದೀಪಕ್, ಉಪ ನೊಂದಣಾಧಿಕಾರಿ ಜಿ.ಎಸ್.ಕುಮಾರಸ್ವಾಮಿ, ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಪರಶಿವನಾಯಕ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿ.ಬಿ ಚೇತನಕುಮಾರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್, ತಾಲೂಕು ಸರ್ಕರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಮಾಜಿ ಅಧ್ಯಕ್ಷ ಚಿಕ್ಕೂನಹಳ್ಳಿ ಜಯರಾಂ, ವಾಸು ಮತ್ತಿತರರಿದ್ದು ಮಾತನಾಡಿದರು.