ಸೂಕ್ತ ಪರಿಹಾರ ಒದಗಿಸದಿದ್ದರೆ ಪ್ರತಿಭಟನೆ-ಎಚ್ಚರಿಕೆ

ಲಿಂಗಸೂಗೂರು.ನ.೨೫-ಕಳೆದ ೧೦-೧೨ ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಹೊಲ-ಗದ್ದೆಗಳ ಬೆಳೆಗಳು ಕೊಚ್ಚಿಹೋಗಿದ್ದು, ಸೂಕ್ತ ರೀತಿಯಲ್ಲಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಹಟ್ಟಿ, ಗುರುಗುಂಟಾ, ಕೋಠಾ, ಗೌಡೂರು, ಗೆಜ್ಜಲಗಟ್ಟಾ, ರೋಡಲಬಂಡಾ, ಪೈದೊಡ್ಡಿ, ಆನ್ವರಿ ಭಾಗದ ತೊಗರಿ, ಜೋಳ, ಹೆಸರು, ಕಡಲೆ, ಮೆಣಸಿನಕಾಯಿ, ಹತ್ತಿ ಹಾಗೂ ಭತ್ತ, ಗೋಧಿ ಸೇರಿ ಬೆಳೆದ ಹಲವು ಗದ್ದೆಗಳು ನೀರು ಪಾಲಾಗಿದ್ದರೆ, ನಿರಂತರ ತೇವಾಂಶದಿಂದ ಕೆಲವೆಡೆ ಬೆಳೆಗಳು ಕೊಳೆತು ಹೋಗಿವೆ. ಕಾಯಿ ಹಿಡಿದು ಒಣಗುವ ಹಂತದಲ್ಲಿದ್ದ ತೊಗರಿ ಮಳೆ-ತೇವಾಂಶಕ್ಕೆ ಎಲೆಗಳು ಉದುರಿ ಹೋಗಿದ್ದು, ಫಸಲು ಹಾಳಾಗಿದೆ. ಹಲವೆಡೆ ಬೆಳೆಗಳು ನೀರುಪಾಲಾಗಿದ್ದು, ಹೊಲ-ಗದ್ದೆಗಳಿಗೆ ಕಾಲಿಡದ ಪರಿಸ್ಥಿತಿ ಉಂಟಾಗಿದೆ.
ಭತ್ತಕ್ಕೆ ಮಾತ್ರ ಪರಿಹಾರ ಒದಗಿಸುತ್ತೇವೆ. ಭತ್ತವನ್ನು ಹೊರತುಪಡಿಸಿ ಯಾವ ಹೊಲದಲ್ಲಿ ನೀರು ನಿಂತು ಬೆಳೆಹಾಳಾಗಿದೆಯೋ ಅಂಥಹ ತೊಗರಿ, ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳನ್ನು ಪರಿಗಣಿಸಲಾಗುವುದು. ಆದರೆ ನೀರು ನಿಲ್ಲದ ಹೊಲದ ಬೆಳೆಗಳನ್ನು ಪರಗಣಿಸಲಾಗುವದಿಲ್ಲವೆಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಕುಪಿತರಾದ ರೈತರು ಜಿಟಿ-ಜಿಟಿ ಮಳೆಗೆ ಹೊಲದಲ್ಲಿ ನೀರು ನಿಲ್ಲಲು ಹೇಗೆ ಸಾಧ್ಯ? ನೀರು ನಿಂತರೆ ಮಾತ್ರವೆ ಬೆಳೆ ನಷ್ಟವೆ? ಕಾಳು ಹಿಡಿದು ರಆಶಿ ಮಾಡುವ ಹೊತ್ತಿಗೆ ನಿರಂತರ ತೇವಾಂಶದಿಂದ ಮೊಳಕೆಯೊಡೆದ ತೊಗರಿಯಿಂದ ಲಕ್ಷಾಂತರ ನಷ್ಟ ಉಂಟಾಗಿದ್ದು, ಭತ್ತ ಸೇರಿ ಹಾಳಾದ ಎಲ್ಲಾ ಬೆಳೆಗಳಿಗೆ ಪರಿಹಾರ ನೀಡಬೇಕು ಇಲ್ಲವಾದರೆ ತಾಲೂಕು ಕೃಷಿ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಲಾಗುವುದೆಂದು ರೈತರಾದ ಚಂದ್ರಶೇಖರ್ ಸಾಹುಕಾರ್, ಗೋಪಾಲ ಕಾರಬಾರಿ ಎಚ್ಚರಿಸಿದ್ದಾರೆ.