ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ, ನ 6: ಕಳೆದ ಮೂರು ತಿಂಗಳಿಂದ ಸುರಿದ ಅಕಾಲಿಕ ಮಳೆಗೆ ಧಾರವಾಡ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಹಾನಿಗೀಡಾದ ಮನೆಗಳ ಪುನರ್ ಪರಿಶೀಲನೆ ನಡೆಸಬೇಕು. ಸೂಕ್ತ ಪರಿಶೀಲನೆ ನಡೆಸದೆ ವರದಿ ನೀಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಹಾಗೂ ಮನೆ ಕಳೆದುಕೊಂಡ ಎಲ್ಲಾ ಸಂತ್ರಸ್ಥರಿಗೆ ಮನೆಹಾನಿ ಪರಿಹಾರ ನೀಡುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಧಾರವಾಡ ತಾಲೂಕಿನ ಕನಕೂರ, ಕವಲಗೇರಿ, ಹೆಬ್ಬಳ್ಳಿ, ಲೋಕೂರ, ನರೇಂದ್ರ, ತಲವಾಯಿ, ಲಕಮಾಪುರ, ಚಂದನಮಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಒಂದರಲ್ಲೇ ಕಳೆದ ಅಕ್ಟೋಬರ್ ತಿಂಗಳಲ್ಲಿ ಸುರಿದ ಅಪಾರ ಮಳೆಯಿಂದ 220 ಮನೆಗಳು ಹಾನಿಗೀಡಾಗಿವೆ. ಆದರೆ ರಾಜೀವ ಗಾಂಧಿ ವಸತಿ ಯೋಜನೆ ಅಡಿ ಈವರೆಗೆ ಕೇವಲ 36 ಜನರಿಗೆ ಮಾತ್ರ ಅನುಮೋದನೆ ನೀಡುವ ಮೂಲಕ 180ಕ್ಕೂ ಹೆಚ್ಚು ಜನರಿಗೆ ಅನ್ಯಾಯ ಎಸಗಿದ್ದಾರೆ ಎಂದು ಕೊರವರ ಆರೋಪಿಸಿದರು.
ಒಂದುವಾರದೊಳಗೆ ಧಾರವಾಡ ತಾಲೂಕಿನ ಎಲ್ಲಾ ಹಳ್ಳಿಗಳ ಮನೆ ಹಾನಿ ಪುನರ್ ಪರಿಶೀಲನೆ ನಡೆಸಬೇಕು. ಕರ್ತವ್ಯ ಲೋಪ ಎಸಗಿರುವ ತಪ್ಪತಸ್ಥ ಅಧಿಕಾರಿಗಳನ್ನು ಹೊರಗಿಟ್ಟು ಪ್ರತ್ಯೇಕ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಜನಜಾಗೃತಿ ಸಂಘ ದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಮಾತನಾಡಿದರು. ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ರಾಜ್ಯ ರೈತ ಸಂಘ, ಹಸಿರು ಸೇನೆಯ ಮಡಿವಾಳಪ್ಪ ಬೆಳವಲದ, ರವಿರಾಜ ಕಂಬಳಿ,ದಲಿತ ಸಂಘರ್ಷ ಸಮಿತಿಯ ಲಕ್ಷ್ಮಣ ದೊಡ್ಡಮನಿ, ನಾರಾಯಣ ಮಾದರ, ಹನುಮಂತ ಮೊರಬ ಉಪಸ್ಥಿತರಿದ್ದರು.