
ದಾವಣಗೆರೆ.ಮೇ.೯: ಮಗು ಜನಿಸಿದ 24 ತಾಸಿನಲ್ಲಿ ತಾಯಿಯೋರ್ವರು ತಮ್ಮ ಅಮೂಲ್ಯ ಹಕ್ಕಾಗಿರುವ ಮತದಾನ ಮಾಡುವ ಬಯಕೆ ಹೊತ್ತು ಕನವರಿಸುತ್ತಿದ್ದಾರೆ. ಇದು ಆರೋಗ್ಯಪೂರ್ಣ, ಪ್ರಜ್ಞಾವಂತ ಮತದಾರರಿಗೆ ಪ್ರೇರಣೆಯಾಗಿದೆ.ಮುಂದೆ ತಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪುಗೊಳ್ಳಲು, ದೇಶದ ಭವಿಷ್ಯ ಭದ್ರತೆಗಾಗಿ ಸೂಕ್ತವಾದ ನೇತಾರರ ಆಯ್ಕೆ ಅತ್ಯಗತ್ಯ. ಇದಕ್ಕಾಗಿ 5 ವರ್ಷಕ್ಕೊಮ್ಮೆ ಬರುವ ಚುನಾವಣೆಯೇ ಸೂಕ್ತ ಸಮಯ ಎಂಬ ಸ್ವಯಂ ಪ್ರೇರಣೆ ಮನಸ್ಥಿತಿ ಬಾಣಂತಿಯದ್ದಾಗಿದೆ. ಇದಕ್ಕೆ ಪತಿ ಬ್ಯಾಂಕ್ ಉದ್ಯೋಗಿ ವಿಜಯ್ ಕುಮಾರ್ ಮತ್ತು ಕುಟುಂಬವು ಹೆಮ್ಮೆ ಪಟ್ಟುಕ್ಕೊಂಡಿದ್ದು, ಮತದಾನಕ್ಕೆ ಸಹಕಾರವೂ ನೀಡಲಾಗಿದೆ.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವರಾಜ್ ಅರಸ್ ಬಡಾವಣೆಯ ನಿವಾಸಿ ಪುಷ್ಪಾ ಎಂಬುವರು ಮೃತ್ಯುಂಜಯ ನರ್ಸಿಂಗ್ ಹೋಮ್ ನಲ್ಲಿ ಭಾನುವಾರ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದು, ಸೀಜರಿನ್ ಮೂಲಕ ಮಗು ಜನ್ಮ ತಾಳಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಮ್ಮ ಹಕ್ಕಾಗಿರುವ ಪವಿತ್ರವಾದ ಮತದಾನವನ್ನು ಮಾಡಬೇಕು, ಹಾಗಾಗಿ ನನ್ನನ್ನು ಆಸ್ಪತ್ರೆಯಿಂದ ಬೇಗ ಕಳುಹಿಸಿಕೊಡಿ ಎಂಬುದಾಗಿ ಆಸ್ಪತ್ರೆಯ ವೈದ್ಯರಾದ ಡಾ. ಶಿವಬಸವ ಸ್ವಾಮಿ ಅವರಲ್ಲಿ ಬಾಣಂತಿ ಪುಷ್ಪಾ ಮನವಿ ಮಾಡಿದ್ದಾರೆ.