
ಕಲಬುರಗಿ: ಮಾ.17:ಪ್ರಸ್ತುತವಾಗಿ ಒತ್ತಡದ ದಾವಂತದ ಬದುಕಿನಲ್ಲಿ ಸರಿಯಾಗಿ ಊಟ ಮತ್ತು ನಿದ್ರೆ ಮಾಡಲು ಸಮಯ ಸಿಗದಂತಾಗಿ, ಚಿಕ್ಕ ವಯಸಿನಲ್ಲಿಯೇ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಘಾತದಂತದ ರೋಗಗಳಿಗೆ ತುತ್ತಾಗಿ ಅಮೂಲ್ಯವಾದ ಜೀವನ ಕಳೆದುಕೊಳ್ಳುವ ಸ್ಥಿತಿ ಉಂಟಾಗಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ. ಆದ್ದರಿಂದ ವಯಸ್ಕರು ದಿನಕ್ಕೆ 7-8 ಗಂಟೆಗಳ ಕಾಲ ಗಾಡವಾದ ನಿದ್ರೆಯನ್ನು ಮಾಡಿದರೆ ಆರೋಗ್ಯಯುತವಾಗಿರಲು ಸಾಧ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಶುಕ್ರÀವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ನಿದ್ರಾ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಿದ್ರೆಯು ವಯಸ್ಸಿಗೆ ತಕ್ಕಂತೆ ಮಾಡಬೇಕು. ಆಗ ತಾನೆ ಜನಸಿದ ಮಗುವಿನಿಂದ 6 ತಿಂಗಳ ಮಗುವಿಗೆ ದಿನಕ್ಕೆ 14-16 ಗಂಟೆಗಳು, 6 ತಿಂಗಳುಗಳಿಂದ 1 ವರ್ಷದ ಮಗುವಿಗೆ 12-14 ಗಂಟೆಗಳು, 1 ವರ್ಷದಿಂದ 2 ವರ್ಷದವರೆಗಿನ ಮಗುವಿಗೆ 11-14 ಗಂಟೆಗಳು, 3-5 ವರ್ಷಗಳ ಮಗುವಿಗೆ 10-13 ಗಂಟೆಗಳು, 6-13 ವರ್ಷದ ಮಕ್ಕಳಿಗೆ 9-11 ಗಂಟೆಗಳು, 14-17 ವರ್ಷದ ವಯಸ್ಕರಿಗೆ 8-10 ಗಂಟೆಗಳು ಮತ್ತು 18 ವರ್ಷ ಮೇಲ್ಪಟ್ಟವರಿಗೆ 7-8 ಗಂಟೆಗಳ ಕಾಲ ಗಾಡವಾದ ನಿದ್ರೆಯ ಅಗತ್ಯವಿದೆ ಎಂದು ನಿದ್ರೆಯ ಮಹತ್ವ ಮತ್ತು ನಿದ್ರಾಹೀನತೆಯಿಂದಾಗುವ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ನಿದ್ರೆ ದೇವರು ನೀಡಿರುವ ಅಮೂಲ್ಯವಾದ ಕೊಡುಗೆ. ದಿನಪೂರ್ತಿ ದುಡಿದ ದೇಹಕ್ಕೆ ವಿಶ್ರಾಂತಿ ಅಗತ್ಯ. ಇದರಿಂದ ದೇಹ ಪುನರ್ ಚೈತನ್ಯ ಪಡೆಯುತ್ತದೆ. ಆದರೆ ಈಗಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಹಗಲು ಮತ್ತು ರಾತ್ರಿಯೆನ್ನದೇ ನಿರಂತರವಾಗಿ ದುಡಿಯುವ ಮೂಲಕ ದೇಹ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದೆ. ಸೂಕ್ತ ನಿದ್ರೆಯ ಕೊರತೆಯಿಂದ ಲವಲವಿಕೆ ಮಾಯವಾಗುವುದು, ನಿಶ್ಯಕ್ತತತೆ, ಏಕಾಗ್ರತೆ ಕೊರತೆ, ತಲೆನೋವು, ಕೆಲಸದ ಸಾಮಥ್ರ್ಯ ಕ್ಷೀಣಿಸುವುದು, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳು ಬೇಗನೆ ದೇಹ ಪ್ರವೇಶ ಪಡೆಯುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಪುಷ್ಪಾ ಆರ್.ರತ್ನಹೊನ್ನದ್, ಜಗನಾಥ ಗುತ್ತೇದಾರ, ಕಿರಣ ಪಾಟೀಲ ಸೇರಿದಂತೆ ಮತ್ತಿತರರಿದ್ದರು.