ಸೂಕ್ತ ಚಿಕಿತ್ಸೆಯಿಂದ ಸಂಪೂರ್ಣವಾಗಿ ಕ್ಷಯರೋಗ ಗುಣಪಡಿಸಬಹುದು: ಡಾ.ಬಿ.ವಿ ಗಿರೀಶ್

ಚಿತ್ರದುರ್ಗ,ಮಾ.27;ಕ್ಷಯರೋಗವು ಸೂಕ್ತ ಚಿಕತ್ಸೆಯಿಂದ ಸಂಪೂರ್ಣವಾಗಿ ಗುಣವಾಗುವ ರೋಗವಾಗಿದ್ದು, ಶೀಘ್ರದಲ್ಲಿ ರೋಗವನ್ನು ಪತ್ತೆಹಚ್ಚಿ ಬಹುವಿಧ ಚಿಕಿತ್ಸೆ ನೀಡಿದಲ್ಲಿ ಬೇಗನೇ ವಾಸಿಯಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಮೆದೆಹಳ್ಳಿ ಗ್ರಾಮದ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಟಿ.ಬಿ ದಿನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ಕ್ಷಯರೋಗ ಪತ್ತೆ ಕಾರ್ಯದಲ್ಲಿ ತೊಡಗಿ ಸಂಶಯಾಸ್ಪದ ಪ್ರಕರಣವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಜಿಲ್ಲಾ ಕ್ಷಯರೋಗ ನಿಯಂತ್ರಣಾ ಕಚೇರಿಗೆ ನಿರ್ದೇಶನ ಮಾಡಿ, ಕ್ಷಯರೋಗ ಪತ್ತೆ ಸುಲಭವಾಗುತ್ತದೆ ಮತ್ತು ಪತ್ತೆಹಚ್ಚಿದ ರೋಗಿಗಳಿಗೆ ನಿರ್ದಿಷ್ಟ ಚಿಕಿತ್ಸೆ ಕೋಡಿಸುವಲ್ಲಿ ಕಾರ್ಯೋನ್ಮುಖರಾಗಿ ಎಂದು ಸಲಹೆ ನೀಡಿದರು.
ಮೆದೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ದುರ್ಗಪ್ಪ ಮಾತನಾಡಿ, ಕೆಮ್ಮು, ಜ್ವರ ಇರುವವರು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಮಾತನಾಡಿ, ಪೋಷಣ್ ಟಿ.ಬಿ ಯೋಜನೆಯಡಿ ಪ್ರತಿ ಟಿ.ಬಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಪೌಷ್ಟಿಕ ಆಹಾರ ಭದ್ರತೆಗಾಗಿ ನೇರ ನಿಘಾವಣೆ ಚಿಕಿತ್ಸೆಯೊಂದಿಗೆ ಪ್ರತಿ ತಿಂಗಳು ರೋಗಿಯ ಖಾತೆಗೆ ಡಿಬಿಟಿ ಮೂಲಕ ರೂ. 500 ಸಂದಾಯವಾಗುತ್ತದೆ. ಕ್ಷಯರೋಗ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ, ಟಿ.ಬಿ ಸೋಲಿಸಿ, ದೇಶ ಗೆಲ್ಲಿಸಿ 2025ರ ಒಳಗೆ ಟಿ.ಬಿ ಮುಕ್ತ ರಾಷ್ಟ್ರವನ್ನಾಗಿಸಲು ಎಲ್ಲರೂ ಪಣತೊಡೋಣ ಎಂದು ತಿಳಿಸಿದರು.
ಇದೇ ವೇಳೆ ಮೆದೆಹಳ್ಳಿ ಗ್ರಾಮದ ಎಲ್ಲ ಬೀದಿಗಳಲ್ಲಿ ಜಾಥಾ ನಡೆಸಲಾಯಿತು ಮತ್ತು ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮ ವಹಿಸಿ ಗಂಟಲು ದ್ರವ ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಮೆದೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಅವರಿಂದ ಮೂರು ಕ್ಷಯರೋಗಿಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕಚೇರಿ ಡಾ.ವನಿತಾ, ಮಾರುತಿ ಪ್ರಸಾದ್, ಶಂಕರ್ ನಾಯ್ಕ್, ಮೆದೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಆಶಾ ಕಾರ್ಯಕರ್ತರು ಇದ್ದರು.