ಸೂಕಿ ವಿಚಾರಣೆ ಪೂರ್ಣ ಡಿ.೬ಕ್ಕೆ ತೀರ್ಪು

ಬ್ಯಾಂಕಾಕ್.ನ೩೦: ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ವಿರುದ್ಧದ ಸಾರ್ವಜನಿಕ ಅಶಾಂತಿಗೆ ಕಾರಣವಾದ ಪ್ರಕರಣಗಳಿಗೆ ಸಂಬಂಧಿಸಿದ ಮೊದಲ ಪ್ರಕರಣದಲ್ಲಿ ತೀರ್ಪನ್ನು ಮ್ಯಾನ್ಮಾರ್ ನ್ಯಾಯಾಲಯವು ಡಿ.೬ಕ್ಕೆ ಕಾಯ್ದಿರಿಸಿದೆ ಎಂದು ವರದಿಯಾಗಿದೆ.
ಇಂದು ಪ್ರಕಟವಾಗಬೇಕಿದ್ದ ತೀರ್ಪನ್ನು ಕೋರ್ಟ್ ೬ ದಿನ ಮುಂದೂಡಿದೆ ಎಂದು ಮೂಲವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಮ್ಯಾನ್ಮಾರ್‌ನಲ್ಲಾದ ಸೇನಾ ದಂಗೆಯಲ್ಲಿ ಬಂಧನಕ್ಕೀಡಾದ ೭೬ ವರ್ಷದ ಸೂಕಿ ಅವರು ೧೦ ಆರೋಪಗಳನ್ನು ಎದುರಿಸುತ್ತಿದ್ದು, ಗರಿಷ್ಠ ೧೦೨ ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.ಮ್ಯಾನ್ಮಾರ್‌ನ ರಾಜಧಾನಿ ನಯ್ಪಿಯಡೊದಲ್ಲಿ ಅವರ ವಿಚಾರಣೆಯನ್ನು ನ್ಯಾಯಾಲಯದ ಮುಚ್ಚಿದ ಕೊಠಡಿಗಳಲ್ಲಿ ನಡೆಸಲಾಗಿದೆ. ಸೂಕಿ ಪರ ವಾದಿಸಲು ಅವರ ಐವರೂ ವಕೀಲರಿಗೆ ಅಲ್ಲಿನ ನ್ಯಾಯಾಲಯ ನಿರ್ಬಂಧ ವಿಧಿಸಿದ್ದು, ಅವರ ಸಂವಹನಗಳು ‘ದೇಶವನ್ನು ಅಸ್ಥಿರಗೊಳಿಸಬಹುದು’ಎಂದು ಅದು ಹೇಳಿದೆ.ಮಿಲಿಟರಿ ಬೆಂಬಲಿತ ಪಕ್ಷವನ್ನು ಸೋಲಿಸಿ ಸೂಕಿ ಪಕ್ಷವು ಪ್ರಚಂಡ ಗೆಲುವು ಪಡೆದ ವರ್ಷದ ನಂತರ ಈ ತೀರ್ಪು ಬರುತ್ತಿದೆ.
ಸೇನಾ ದಂಗೆ ನಡೆದು ಹಲವು ತಿಂಗಳುಗಳೇ ಆಗಿದ್ದರೂ ಸಹ ಈಗಲೂ ಜನರು ಬೀದಿಗಿಳಿದು ಮಿಲಿಟರಿ ಆಡಳಿತದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ವೈದ್ಯರು ಮತ್ತು ದಾದಿಯರು ಪ್ರತಿಭಟನಾರ್ಥವಾಗಿ ಕೆಲಸವನ್ನು ನಿಲ್ಲಿಸಿದ್ದಾರೆ. ‘ನಾಗರಿಕ ಅಸಹಕಾರ ಚಳವಳಿ’ನಡೆಯುತ್ತಿದ್ದು, ಅನೇಕರು ತೆರಿಗೆ ಪಾವತಿಸಲು ನಿರಾಕರಿಸಿದ್ದಾರೆ.
ಬಂಧನದ ಭೀತಿಯ ನಡುವೆಯೂ ಚಳವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಶಸ್ತ್ರ ಪ್ರತಿಭಟನಾಕಾರರು ಮತ್ತು ದಂಗೆಕೋರ ಗುಂಪುಗಳು ಸೇನೆಯ ವಿರುದ್ಧ ಹಿಟ್-ಅಂಡ್-ರನ್ ದಾಳಿಗಳನ್ನು ಪ್ರಾರಂಭಿಸುತ್ತಿದ್ದಾರೆ.