ಸುಸ್ಥಿರ ಮುಟ್ಟಿನ ನೈರ್ಮಲ್ಯ ನಿರ್ವಹಣೆ ತರಬೇತಿ:ಮಹಿಳಾ ಸ್ನೇಹಿ ಮುಟ್ಟಿನ ಕಪ್ ಬಳಕೆ ಆಂದೋಲನವಾಗಲಿ:ಬಿ.ಫೌಜಿಯಾ ತರನ್ನುಮ್

ಕಲಬುರಗಿ,ಅ.12: ಸುಸ್ಥಿರ ಮುಟ್ಟಿನ ನೈರ್ಮಲ್ಯ ನಿರ್ವಹಣೆಗೆ ಮಹಿಳೆಯರು ಮಹಿಳಾ ಸ್ನೇಹಿಯಾಗಿರುವ ಪುನರ್ ಬಳಕೆಯ ಮುಟ್ಟಿನ ಕಪ್ ಬಳಸಬೇಕು. ಇದು ಚಳುವಳಿ ರೂಪದಲ್ಲಾಗಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕರೆ ನೀಡಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ ಮತ್ತು ಮಹಿಳಾ ಮತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸುಸ್ಥಿರ ಮುಟ್ಟಿನ ನೈರ್ಮಲ್ಯ ನಿರ್ವಹಣೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಪ್ರಪಂಚದಾದ್ಯಂತ 10 ಮಿಲಯನ್ ಜನರು ಪುನರ್ ಬಳಕೆಯ ಮುಟ್ಟಿನ ಕಪ್ ಬಳಸುತ್ತಿದಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ. ಹಿಂದುಳಿದ ಪ್ರದೇಶವಾದ ಕಲಬುರಗಿಯಲ್ಲಿ ಇಂದು ಇದರ ಬಳಕೆ ನಿಟ್ಟಿನಲ್ಲಿ ಇಷ್ಟೊಂದು ಮಹಿಳೆಯರು ಇಲ್ಲಿ ಸೇರಿರುವುದು ಮಹಿಳೆಯರಿಗೆ ಹೆಮ್ಮೆಯ ವಿಷಯ ಎಂದ ಅವರು ತುಂಬಾ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವೆ ಎಂದರು.
ಇಂದಿಲ್ಲಿ ತರಬೇತಿ ಪಡೆದ ಮಹಿಳೆಯರೇ ಇದರ ಬಳಕೆಗೆ ರಾಯಭಾರಿಗಳು ಎಂದು ಬಣ್ಣಿಸಿದ ಅವರು, ಕ್ಷೇತ್ರ ಮಟ್ಟದಲ್ಲಿ ಗರ್ಭೀಣಿ, ಬಾಣಂತಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತರಬೇತಿಗೆ ಹಾಜರಾದ ಮಹಿಳೆಯರಿಗೆ ಡಿ.ಸಿ. ಅವರು ಕರೆ ನೀಡಿದರು.
ಸಂಪನ್ಮೂಲ ವ್ಯಕಿಯಾಗಿ ಆಗಮಿಸಿದ ಡಾ. ಮೀನಾಕ್ಷಿ ಭರತ್ ಅವರು ಮಾತನಾಡಿ, ಮುಟ್ಟಿನ ದಿನಗಳಲ್ಲಿ ರಾಸಾಯನಿಕ ಪದಾರ್ಥಗಳಿಂದ ಕೂಡಿದ ಸ್ಯಾನಿಟರಿ ನ್ಯಾಪ್ಕಿನ್ ಬಳಕೆ ಮಾಡದೆ ಹೆಚ್ಚಿನ ಆರ್ಥಿಕ ಹೊರೆ ಇಲ್ಲದ ಮೆನ್ಸ್‍ಟ್ರೂಯಲ್ ಕಪ್ ಬಳಸುವಂತೆ ಸಲಹೆ ನೀಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಸಾಮಾಜಿಕ ಕಾರ್ಯಕರ್ತೆ ರೇಖಾ ಪ್ರದೀಪ ಮಾತನಾಡಿ, ಮುಟ್ಟಿನ ಕಪ್ ಬಳಕೆ ಮಾಡುವುದರಿಂದ ಪರಿಸರವನ್ನು ಪ್ರಧೂಶಿತವಾಗುವುದನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ತಿಳಿಸಿದರು. ಮೈಸೂರು ಜಿಲ್ಲೆಯ ಪಿ.ಡಿ.ಓ. ಶೋಭಾರಾಣಿ ಇವರು ಮೆನ್‍ಸ್ಟ್ರೂಯಲ್ ಕಪ್ ಬಳಸುವ ವಿಧಾನ ಕುರಿತು ಮಾಹಿತಿ ನೀಡಿದರು.
280 ಮುಟ್ಟಿನ ಕಪ್ ವಿತರಣೆ: ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತರಬೇತಿಗೆ ಹಾಜರಾದ 280ಮಹಿಳಾ ಸಿಬ್ಬಂದಿಗಳಿಗೆ ಮುಟ್ಟಿನ ಕಪ್‍ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಯೋಜನಾ ನಿರ್ದೇಶಕ ಜಗದೇವಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಆರೋಗ್ಯ ಇಲಾಖೆಯ ಸ್ಟಾಫ್ ನರ್ಸ್‍ಗಳು (ಶೂಶ್ರುಷಕಿಯರು), ಆಶಾ ಕಾರ್ಯಕರ್ತೆಯರು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮಹಿಳಾ ಹಾಸ್ಟೆಲ್ ವಾರ್ಡನ್‍ಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಹಾಗೂ ಕಿರಿಯ ಮೇಲ್ವಿಚಾರಕಿಯರು ತರಬೇತಿಯಲ್ಲಿ ಭಾಗವಹಿಸಿದ್ದರು.