ಸುಸ್ಥಿರ ಮುಟ್ಟಿನ ನಿರ್ವಹಣೆಯು ಆಂದೋಲನವಾಗಲಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಅ14: ಸುಸ್ಥಿರ ಮುಟ್ಟಿನ ನಿರ್ವಹಣೆಯು ಜಿಲ್ಲೆಯಲ್ಲಿ ಆಂದೋಲನವಾಗಿ ಈ ಮೂಲಕ  ಸಾಮಾಜಿಕ ಕ್ರಾಂತಿಯಾಗಬೇಕಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಯುನಿಸೆಫ್ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುಸ್ಥಿರ ಮುಟ್ಟಿನ ನಿರ್ವಹಣೆ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿಸಾಡಿದ ಸ್ಯಾನಿಟರಿ ಪ್ಯಾಡ್‍ಗಳಿಂದ ಪರಿಸರ ಕಲುಷಿತಗೊಳ್ಳುತ್ತಿದೆ. ನಂತರದಲ್ಲಿ ಇದನ್ನು ಸುಸ್ಥಿರ ಮುಟ್ಟಿನ ಬಳಕೆಯಿಂದ ತಪ್ಪಿಸಬಹುದಾಗಿದೆ, ಇದನ್ನು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಹಿಂದುಳಿಯುವಿಕೆ ಹಣೆಪಟ್ಟಿಯಿಂದ ಹೊರಬರಲು ಇಂತಹ ಕಾರ್ಯಾಗಾರಗಳ ಮೂಲಕ ಭೂಮಿಕೆಯಾಗಬೇಕಿದೆ ಎಂದರು.
ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಅವರು ಮಾತನಾಡಿ ಸಮಾಜದ ಮತ್ತು ಕುಟುಂಬ ಆರೋಗ್ಯವು ಮಹಿಳೆಯ ಆರೋಗ್ಯದ ಮೇಲೆ ಅವಲಂಭಿತವಾಗಿರುತ್ತದೆ. ಸುಸ್ಥಿರ ಮುಟ್ಟಿನ ನಿರ್ವಹಣೆಯಲ್ಲಿ ಮಹಿಳೆಯರು ಮುಜುಗರಪಡುವುದರಿಂದ ಹೊರಬಂದು ಸ್ವಚ್ಛತೆಯನ್ನು ಕಾಪಾಡಿಕೊಂಡು ಬರಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಕ್ರಮವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಡಾ.ಮೀನಾಕ್ಷಿ, ಡಾ. ಶಾಂತಿ,  ಯುನಿಸೆಫ್ ಪ್ರತಿನಿಧಿ ದಿಲೀಪ್ ಕುಮಾರ್, ಆರ್.ಸಿ.ಹೆಚ್.ಒ. ಡಾ.ಜಂಬಯ್ಯ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ  ಉಪನಿರ್ದೇಶಕಿ ಶ್ವೇತಾ ಎಸ್. ಪಾಲ್ಗೊಂಡಿದ್ದರು.