ಸುಸ್ಥಿರ ಆರೋಗ್ಯ ಕಾಪಾಡಿ ಐಸಿಟಿಸಿ ಆಪ್ತ ಸಮಾಲೋಚಕ ನಾಗಲಿಂಗ ಸಲಹೆ

ಅರಕೇರಾ.ಡಿ.೦೧- ಪ್ರತಿಯೊಬ್ಬರೂ ಸುಸ್ಥಿರ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಐಸಿಟಿಸಿ ಆಪ್ತ ಸಮಾಲೋಚಕ ನಾಗಲಿಂಗ ಹೇಳಿದರು.
ತಾಲೂಕಿನ ಬೆಂಡರ ಗಣೇಕಲ್ ಗ್ರಾಮದ ದುರುಗಮ್ಮ ದೇವಸ್ಥಾನದ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ಸಮುದಾಯ ಆಧಾರಿತ ತಪಾಸಣಾ ಶಿಬಿರ ಉದ್ದೇಶಿಸಿ ಗುರುವಾರ ಮಾತನಾಡಿದರು. ಪ್ರತಿಯೊಬ್ಬರೂ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ದುಸ್ತರ. ಹೀಗಾಗಿ ಶಿಬಿರದ ಮೂಲಕ ಆರೋಗ್ಯ ತಪಾಸಣೆ, ಜಾಗೃತಿ ಮಾಡಲಾಗುತ್ತಿದೆ. ಇದರ ಸದುಪಯೋಗ ಜನರು ಪಡೆಯಬೇಕು. ಭಾರತ ದೇಶದಲ್ಲಿ ೨೦೩೦ ರೊಳಗೆ ಏಡ್ಸ್ ಹೋಗಲಾಡಿಸುವ ಗುರಿಯನ್ನು ಹೊಂದಲಾಗಿದೆ. ಸಮುದಾಯದ ಜನರಿಗೆ ಏಡ್ಸ್ ಹರಡುವ ವಿಧಾನ, ಸೋಂಕಿತರಿಗೆ ಇರುವ ಲಕ್ಷಣ, ತಡೆಗಟ್ಟುವ ವಿಧಾನವನ್ನು ತಿಳಿಸಿದರು.
ಕ್ಷಯ ರೋಗ ಮೇಲ್ವಿಚಾರಕ ಮಹೇಶ ನಾಯಕ ಮಾತನಾಡಿ, ಅಕ್ಕ ಪಕ್ಕದ ಜನರಲ್ಲಿ ಕ್ಷಯ ರೋಗ ಕಂಡು ಬಂದರೆ ಜಾಗೃತಿ ವಹಿಸಬೇಕು. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ಜ್ವರ ಬರುವುದು, ಕಫದಲ್ಲಿ ರಕ್ತ ಬರುವುದು, ತೂಕ ದಲ್ಲಿ ಇಳಿಕೆ ಮತ್ತು ಎದೆನೋವು ಕಂಡು ಬಂದಲ್ಲಿ ತಪಾಸಣೆಗೆ ಒಳಪಡಬೇಕು ಎಂದರು.
ಶಿಬಿರದಲ್ಲಿ ಸಕ್ಕರೆ ಕಾಯಿಲೆ, ಬಿ.ಪಿ, ಹೆಚ್‌ಐವಿ, ಕಫ, ಪರೀಕ್ಷೆಗೆ ೧೧೨ ಜನ ಒಳಪಟ್ಟರು. ಗ್ರಾ.ಪಂ.ಸದಸ್ಯೆ ಹನುಮಂತಿ, ಗ್ರಾಮಸ್ಥರಾದ ಸಾಬಣ್ಣ ಪೂಜಾರಿ, ಬಲವಂತ, ಕೆಎಚ್‌ಪಿಟಿ ಸಂಯೋಜಕ ಮಹ್ಮದ್ ರಫಿ, ಆರೋಗ್ಯ ನಿರೀಕ್ಷಣಾಧಿಕಾರಿ ರಾಚನಗೌಡ, ಆರ್‌ಡಿಎಸ್ ಅಬ್ದುಲ್ ಹಮೀದ್, ಎಲ್‌ಟಿಒ ಚಂದ್ರಕಲಾ, ಪಿಎಚ್‌ಸಿಒ ರಶೀದಾ ಬೇಗಂ, ಸಿಎಚ್‌ಒ ಸಮೀನಾ ಸುಲ್ತಾನ, ಪಿಒಸಿಒ ಮಂಜುಳಾ ಇತರರಿದ್ದರು.