ಸುಸ್ಥಿರ ಅಭಿವೃದ್ಧಿಗೆ ಶಾಲೆಗಳೇ ಅಡಿಪಾಯವಾಗಲಿ:ಡಾ.ಎಸ್.ಎಂ.ಶಶಿಧರ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.26: “ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಬದಲಾವಣೆಯ ಶಕ್ತಿಕೇಂದ್ರಗಳು. ಆದ್ದರಿಂದ, ಸುಸ್ಥಿರ ಅಭಿವೃದ್ಧಿಯ ತತ್ವಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಾಲೆಗಳು ದೃಢವಾದ ಅಡಿಪಾಯದಂತೆ ಕಾರ್ಯನಿರ್ವಹಿಸಬೇಕಾಗಿದೆ” ಎಂದು ತಂತ್ರಜ್ಞ ಹಾಗೂ ಬೆಂಗಳೂರಿನ ‘ಸ್ಕಿಲ್-ಲಿಫ್ಟ್’ ಸಂಸ್ಥೆಯ ಚೀಫ್ ಮೆಂಟರ್ ಡಾ.ಎಸ್.ಎಂ.ಶಶಿಧರ್ ಅಭಿಪ್ರಾಯಪಟ್ಟರು.
ಅವರು ಹೊಸಪೇಟೆಯ ‘ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ’ದಲ್ಲಿ ನಿನ್ನೆ  ಏರ್ಪಡಿಸಿದ್ದ ಸುಸ್ಥಿರ ಅಭಿವೃದ್ಧಿಯ ಕುರಿತ ವಿಶೇಷ ತಜ್ಞ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
“ಎಳೆಯ ವಯಸ್ಸಿನಲ್ಲಿಯೇ ಸುಸ್ಥಿರತೆಯ ಬೀಜಗಳನ್ನು ನೆಡುವುದು ಅತ್ಯವಶ್ಯ. ಸುಸ್ಥಿರತೆಯ ತತ್ವಗಳನ್ನು ಪಠ್ಯಕ್ರಮ ಮತ್ತು ಪ್ರಾಯೋಗಿಕ ಕಲಿಕೆಗಳಲ್ಲಿ ಸಂಯೋಜಿಸಿ ಜಾಗೃತಿ ಮೂಡಿಸುವುದರ ಮೂಲಕ ವಿದ್ಯಾರ್ಥಿಗಳು ಸುಸ್ಥಿರ ವಿಶ್ವ ನಿರ್ಮಾಣಕ್ಕಾಗಿ ತುಡಿಯುವಂತೆ, ಕಾರ್ಯೋನ್ಮುಖವಾಗುವಂತೆ ಮಾಡಬೇಕೆಂದರು.
ಹವಾಮಾನ ಬದಲಾವಣೆ, ಪರಿಸರ ಅವನತಿ, ಅಸಮಾನತೆ, ಬಡತನ ಮತ್ತು ಹಸಿವು ಮುಂತಾದ ಸಾಮಾಜಿಕ-ಆರ್ಥಿಕ ಮತ್ತು ಪರಿಸರ ಸಮಸ್ಯೆಗಳ ನಿರ್ವಹಣೆಗೆ.ವಿಶ್ವಸಂಸ್ಥೆಯು ಪ್ರಸ್ತಾಪಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳು- 2030 ನಿರ್ಣಾಯಕ ಮಾರ್ಗದರ್ಶಿ ತತ್ವಗಳಾಗಿವೆ. ಇರುವ ಸಂಪನ್ಮೂಲಗಳನ್ನು ಮಿತವಾಗಿ ಬಳಸಿಕೊಂಡು ಮುಂದಿನ ಜನಾಂಗಕ್ಕೂ, ಮುಂದಿನ ತಲೆಮಾರಿಗೂ ಬಿಟ್ಟು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ನಮ್ಮ ಸುತ್ತಮುತ್ತಲಿನ ನೀರು, ಗಾಳಿ, ಮಣ್ಣು ಇವುಗಳನ್ನು ಮಲಿನ ಮಾಡದೆ ಬದುಕಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಅದಕ್ಕೆ ಪರ್ಯಾಯವಾದ ವಸ್ತುಗಳನ್ನು ಬಳಸಬೇಕು. ಇತರರಿಗೂ ಬಳಸುವಂತೆ ಉತ್ತೇಜನ ನೀಡಬೇಕು. ಹೆಚ್ಚು ಸಸಿಗಳನ್ನು ನೆಟ್ಟು ಭೂಮಿಯ ತಾಪಮಾನವನ್ನು ಕಡಿಮೆ ಮಾಡಬೇಕೆಂದರು.
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಮನೋಹರ ಲಾಲ್ ಜಿಂಜರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,  “ವಿದ್ಯಾರ್ಥಿಗಳಲ್ಲಿ ಜಾಗತಿಕ ವಿದ್ಯಮಾನಗಳ ಬಗೆಗೆ ಜಾಗೃತಿ ಮತ್ತು ಅರಿವು ಮೂಡಿಸಲು ಪಿಎಂ ಶ್ರೀ ಯೋಜನೆಯ ಅಡಿಯಲ್ಲಿ ವಿಶೇಷ ಸರಣಿ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಪಿಎಂ ಶ್ರೀ ಯೋಜನೆಗೆ ಹೊಸಪೇಟೆಯ ಕೇಂದ್ರೀಯ ವಿದ್ಯಾಲಯ ಆಯ್ಕೆಯಾಗಿದ್ದು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮಾದರಿ ಶಾಲೆಯಾಗಿ ರೂಪುಗೊಳ್ಳಲಿದೆಂದರು.
ಶಾಲೆಯ ಅಧ್ಯಾಪಕ ಎಸ್ ಕೆ ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸದ ನಂತರ ವಿದ್ಯಾರ್ಥಿಗಳು ಶಶಿಧರ್ ಅವರೊಂದಿಗೆ ಸಂವಾದದಲ್ಲಿ  ಪಾಲ್ಗೊಂಡು, ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಂಡರು.