ಸುಸೂತ್ರ ಸಿಇಟಿ ಪರೀಕ್ಷೆ ಅಗತ್ಯ ಕ್ರಮ:ಡಿಸಿ ವೆಂಕಟೇಶ್ 7 ಪರೀಕ್ಷಾ ಕೇಂದ್ರಗಳು/3226 ಜನ ವಿದ್ಯಾರ್ಥಿಗಳು


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ18: ಮೇ.20 ಹಾಗೂ 21ರಂದು ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಸಮಯದಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿಗಾಗಿ ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೃತ್ತಿಪರ ಕೋರ್ಸ್‍ಗಳಾದ ಇಂಜಿನಿಯರಿಂಗ್, ಕೃಷಿ, ವಿಜ್ಞಾನ, ಪಶುವೈದ್ಯಕೀಯ, ಯೋಗ ಮತ್ತು ನ್ಯಾಚುರೋಪತಿ, ಫಾರ್ಮಸಿ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯು ಎರಡು ದಿನಗಳ ನಡೆಯಲಿದ್ದು, ನಾಲ್ಕು ವಿಷಯಗಳ ಪರೀಕ್ಷೆ ಒಳಗೊಂಡಿರುತ್ತದೆ. ಮಾರ್ಗಸೂಚಿ ಅನ್ವಯ ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪರೀಕ್ಷೆಗೆ ನೋಂದಾಯಿತ ವಿದ್ಯಾರ್ಥಿಗಳು ಪರೀಕ್ಷೆ ಆರಂಭವಾಗುವ ಕನಿಷ್ಠ ಎರಡು ಗಂಟೆಯ ಮೊದಲು ಪರೀಕ್ಷಾ ಕೇಂದ್ರದಲ್ಲಿ ಇರಬೇಕು. ವಿದ್ಯಾರ್ಥಿಗಳ ಪ್ರವೇಶ ಪತ್ರ ಹಾಗೂ ಗುರುತಿನ ಚೀಟಿ ಪರಿಶೀಲನೆ ಕೈಗೊಳ್ಳುವ ಜೊತೆಗೆ ಪ್ರಶ್ನೆ ಪತ್ರಿಕೆ, ಓಎಂಆರ್ ಪ್ರತಿಕೆಗಳನ್ನು ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರದಲ್ಲಿ ರವಾನಿಸಲು ನಿಯೋಜಿತ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಹಾಗೂ ಪ್ರಶ್ನೆ ಪತ್ರಿಕೆ ರವಾನೆ ವೇಳೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಿ, ಪರೀಕ್ಷಾ ಕೇಂದ್ರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗುತ್ತದೆ. ಪರೀಕ್ಷಾ ವೀಕ್ಷಕರು ಪರೀಕ್ಷಾ ಸಮಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೂ ಜಿಲ್ಲಾಡಳಿತದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
7 ಪರೀಕ್ಷಾ ಕೇಂದ್ರಗಳು:
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಾಗರಾಜ್ ಹವಾಲ್ದಾರ್ ಮಾತನಾಡಿ ಈ ಬಾರಿ ನಗರದ 7 ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ಒಟ್ಟು 3226 ಜನ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 456, ಟಿಬಿ ಡ್ಯಾಂನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 360, ವಿಜಯನಗರ ಕಾಲೇಜಿನಲ್ಲಿ 706, ಗುರು ಪದವಿಪೂರ್ವ ಕಾಲೇಜಿನಲ್ಲಿ 288, ಚಿತ್ತವಾಡ್ಗಿಯ ಪದವಿಪೂರ್ವ ಕಾಲೇಜಿನಲ್ಲಿ 408, ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ 384 ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ 624 ಜನ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತದೆ. ಈಗಾಗಲೇ ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ, ಅಧಿಕಾರಿಗಳಿಗೆ ಮಾರ್ಗಸೂಚಿಗಳ ಮಾಹಿತಿ ನೀಡಲಾಗಿದೆ. ಪರೀಕ್ಷೆ ಸಮಯದಲ್ಲಿ ಪ್ರಶ್ನೆ ಪತ್ರಿಕೆ, ಓಎಂಆರ್ ಪತ್ರಿಕೆಗಳ ಸೀಲ್ ಓಪನ್ ಮಾಡುವ ಹಾಗೂ ವಿದ್ಯಾರ್ಥಿಗಳಿಗೆ ವಿತರಿಸುವ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡ್ ಸಹ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅಂಗವಿಕಲ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕಾಲಾವಕಾಶ:
ಪ್ರವೇಶ ಪರೀಕ್ಷೆ ಬರೆಯಲಿರುವ ಅಂಗವಿಕಲ ವಿದ್ಯಾರ್ಥಿಗಳಿಗೆ ಒಂದು ಗಂಟೆಗೆ 20 ನಿಮಿಷಗಳಷ್ಟು ಹೆಚ್ಚುವರಿ ಕಾಲಾವಕಾಶವನ್ನು ಪರೀಕ್ಷಾ ಪ್ರಾಧಿಕಾರದಿಂದ ಒದಗಿಸಲಾಗಿದೆ ವಿದ್ಯಾರ್ಥಿಗಳು ಯಾವುದೇ ಮಾಹಿತಿ ಪಡೆಯಲು ಪರೀಕ್ಷಾ ಪ್ರಾಧಿಕಾರದ http://kea.kar.nic.in ವೆಬ್‍ಸೈಟ್‍ಗೆ ಪರಿಶೀಲಿಸಬಹುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವೀರನಗೌಡ, ತಹಶೀಲ್ದಾರ್ ಪ್ರತಿಭಾ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.