ಸುಸಜ್ಜಿತ ನೂತನ ದಾಸೋಹ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಿ

ಚಾಮರಾಜನಗರ, ಆ.03-ಮಲೆ ಮಹದೇಶ್ವರ ಬೆಟ್ಟದಲ್ಲಿ ಸುಸಜ್ಜಿತ ನೂತನ ದಾಸೋಹ ಭವನ ನಿರ್ಮಾಣಕ್ಕಾಗಿ ವಿಸೃತ ಯೋಜನಾ ವರದಿಯನ್ನು ಸಿದ್ದಪಡಿಸಿ ನಾಲ್ಕರಿಂದ ಐದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವವಿ. ಸೋಮಣ್ಣ ಅವರು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿಂದು ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಭಕ್ತಾಧಿಗಳ ಸೌಕರ್ಯಕ್ಕಾಗಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಭಕ್ತರ ಸಂಖ್ಯೆಯು ಹೆಚ್ಚುತ್ತಿದೆ. ಭಕ್ತರಿಗೆ ಮೂಲ ಸೌಕರ್ಯವನ್ನು ಸಮರ್ಪಕವಾಗಿ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ದಾಸೋಹ ಭವನ ಅಗತ್ಯವಿದ್ದು ಇದಕ್ಕಾಗಿ ವಿಸೃತ ಯೋಜನಾ ವರದಿ ಹಾಗೂ ಅಂದಾಜು ಪಟ್ಟಿಯನ್ನು ಸಿದ್ದಪಡಿಸಿ ತುರ್ತಾಗಿ ಸಲ್ಲಿಸಬೇಕು. ನಾಲ್ಕರಿಂದ ಐದು ತಿಂಗಳೊಳಗೆ ನೂತನ ದಾಸೋಹ ಭವನ ಕಾಮಗಾರಿ ಪೂರ್ಣವಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಭಕ್ತಾಧಿಗಳ ವಾಸ್ತವ್ಯಕ್ಕಾಗಿ ವಸತಿ ಗೃಹಗಳು ನಿರ್ಮಾಣವಾಗಬೇಕಿದೆ. ಪ್ರಗತಿಯಲ್ಲಿರುವ 512 ಕೊಠಡಿಗಳ ವಸತಿಗೃಹ ಕಾಮಗಾರಿಯನ್ನು ವಿಳಂಬ ಮಾಡದೇ ಬೇಗ ಪೂರ್ಣಗೊಳಿಸಬೇಕು. ಇನ್ನೂ ವಿಳಂಬವಾದರೆ ಸಹಿಸುವುದಿಲ್ಲವೆಂದು ಜಿಲ್ಲಾ ಉಸ್ತುವಾರಿಸಚಿವರು ತಾಕೀತು ಮಾಡಿದರು.
ಬಹಳ ದಿನಗಳ ಹಿಂದೆ ಆರಂಭವಾಗಿರುವ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಕೆಲಸ ವಹಿಸಿಕೊಂಡಿರುವ ಗುತ್ತಿಗೆದಾರರು, ಅಧಿಕಾರಿಗಳು ಇನ್ನು ವಿಳಂಬ ಧೋರಣೆ ತೋರದೆ ಕಾಮಗಾರಿ ಚುರುಕುಗೊಳಿಸಬೇಕು. ನವೆಂಬರ್ ಇಲ್ಲವೇ ಡಿಸೆಂಬರ್ ಒಳಗೆ ಕಾಮಗಾರಿ ಮುಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗಿನ ಮೆಟ್ಟಿಲುಗಳ ಕಾಮಗಾರಿಯೂ ಸಹ ನಿರೀಕ್ಷಿತ ವೇಗದಲ್ಲಿ ನಿರ್ವಹಿಸಬೇಕು. ದೊಡ್ಡಕೆರೆ ಅಭಿವೃದ್ದಿ ಕಾಮಗಾರಿ, ಕ್ಯೂ ಲೈನ್ ಅಭಿವೃದ್ದಿ ಕೆಲಸಗಳು ಸಹ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಒಂದು ಮೆಗಾ ವ್ಯಾಟ್ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣ ಕೆಲಸವು ಬೇಗ ಆರಂಭಿಸುವಂತೆ ಸಚಿವರು ಸೂಚಿಸಿದರು.
ದೀಪದ ಒಡ್ಡುವಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ 108 ಅಡಿ ಎತ್ತರದ ಮಹದೇಶ್ವರ ಸ್ವಾಮಿ ಪ್ರತಿಮೆ ಕಾರ್ಯದ ಕಾಮಗಾರಿಯ ವಿವರ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಕೆಲ ಮಾರ್ಪಾಡುಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಎಸ್. ಕಾತ್ಯಾಯಿನಿದೇವಿ ಅವರು ವಿವಿಧ ಅಭಿವೃದ್ದಿ ಕಾಮಗಾರಿ ನಿರ್ವಹಣೆ ಸಂಬಂಧ ಸಭೆಗೆ ವಿವರ ನೀಡಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್‍ಕುಮಾರ್, ಬಸವರಾಜುಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.