ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಪಾರ

ಸೇಡಂ.ಮಾ.೧೮;ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಮತ್ತು ಶಿಕ್ಷಣ ಬಹಳ ಮುಖ್ಯ. ಸುಸಂಸ್ಕೃತ ಸದೃಢ ಸಮಾಜ ನಿರ್ಮಾಣಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ತಾಲೂಕಿನ ಮಳಖೇಡ ಮೂಲಾಧಾರ ಸಂಸ್ಥಾನ ಬೃಹನ್ಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಮಾಡುತ್ತಾ ಬಂದಿದೆ. ಜಾತಿಗಿಂತ ನೀತಿ ಬಹಳ ದೊಡ್ಡದು. ಪರಸ್ಪರ ಸಾಮರಸ್ಯ ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಮಠಗಳು ಶ್ರಮಿಸುತ್ತಾ ಬಂದಿವೆ. ಆಧುನಿಕತೆಯ ಮತ್ತು ವೈಚಾರಿಕತೆ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ಅತಿಯಾದ ವೈಚಾರಿಕತೆ ಧರ್ಮದ ವಿನಾಶಕ್ಕೆ ಕಾರಣವಾಗುತ್ತದೆ. ಸತ್ಯ ಶುದ್ಧ ತತ್ವ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಂಡರೆ ಬಾಳೆಲ್ಲವು ಉಜ್ವಲ. ಸಂಸ್ಕಾರದ ಕೊರತೆಯಿಂದಾಗಿ ಮಾನವ ಜೀವನ ಅತೃಪ್ತಿ ಅಸಮಾಧಾನದಿಂದ ಕೂಡಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಪರಿಪಾಲಿಸದಿದ್ದರೆ ಜೀವನ ವ್ಯರ್ಥವೆಂದು ಎಚ್ಚರಿಸಿದ್ದಾರೆ. ವೀರಶೈವ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿದ್ದಾರೆ. ಮಳಖೇಡ ಮೂಲಾಧಾರ ಸಂಸ್ಥಾನ ಬೃಹನ್ಮಠ ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು ವಿದ್ಯಾ ವಿನಯ ವೇದ ಜೋತಿಷ್ಯ ವಿದ್ವಾನ್ ವಿರೂಪಾಕ್ಷ ದೇವರಿಗೆ ಶ್ರೀ ಗುರು ಪಟ್ಟಾಧಿಕಾರ ನೆರವೇರಿಸಿ ನೂತನ ಶ್ರೀಗಳಿಗೆ ‘ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮಿಗಳು’ ಎಂಬ ನೂತನ ಅಭಿದಾನದಿಂದ ದಂಡ ಕಮಂಡಲ ಸಮೇತ ಪಂಚ ಮುದ್ರಾ ಅನುಗ್ರಹಿಸಿ ಶ್ರೀ ಪೀಠದಿಂದ ರೇಶ್ಮೆ ಮಡಿ, ಚಿನ್ನದುಂಗುರ, ಸ್ಮರಣಿಕೆ, ಫಲ ಪುಷ್ಪಗಳಿತ್ತು ಶುಭ ಹಾರೈಸಿದರು.