
ದಾವಣಗೆರೆ, ಮಾ.೫; ದಾವಣಗೆರೆ ತಾಲ್ಲೂಕಿನ ಶ್ರೀಕ್ಷೇತ್ರ ಕಡಲೇಬಾಳು ಗ್ರಾಮದ ಶ್ರೀ ನಾಗಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲಯದ 5ನೇ ವರ್ಷದ ವಾರ್ಷಿಕೋತ್ಸವ ಇತ್ತೀಚಿಗೆ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ವಿಧಿ ವಿಧಾನಗಳ ಸರ್ಪ ಹೋಮ ಭಕ್ತಿ ಪರಂಪರೆಯ ಮೂಲಮಂತ್ರ, ಹೋಮ, ಹವನ, ಅಭಿಷೇಕ ಸಾಮೂಹಿಕ ಆಶ್ಲೇಷ ಬಲಿ, ಬ್ರಹ್ಮಕಲಶಾಭಿಷೇಕ, ಅಲಂಕಾರ ರಥೋತ್ಸವ, ಅನ್ನಸಂತರ್ಪಣೆ ಹಾಗೂ ಮಹಿಳೆಯರ ಸಮೂಹ ಭಜನೆ ಭರತನಾಟ್ಯದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸುಸಂಪನ್ನಗೊಂಡಿತು ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀಪಾದ ದೇಶಪಾಂಡೆ ತಿಳಿಸಿದ್ದಾರೆ.ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ವಿಷ್ಣುತೀರ್ಥ ಪೀಠದ ಶ್ರೀಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಮಹಾಸ್ವಾಮಿಗಳು ಈ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದು ಶ್ರೀಗಳ ಪಾದಪೂಜೆಯೊಂದಿಗೆ ಗೌರವಿಸಲಾಯಿತು ಎಂದು ದಾವಣಗೆರೆಯ ಶ್ರೀ ಗಾಯತ್ರಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.ದಾವಣಗೆರೆಯ ಶ್ರೀ ಶಂಕರಮಠದ ಮುಖ್ಯಸ್ಥರು ದಾವಣಗೆರೆ ಜಿಲ್ಲಾ ಪುರೋಹಿತ ಸಂಘದ ಜಿಲ್ಲಾಧ್ಯಕ್ಷರಾದ ವೇದಮೂರ್ತಿ ಪವನ್‌ಭಟ್, ಶ್ರೀ ಗಾಯತ್ರಿ ಪರಿವಾರದ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ದಂಪತಿಗಳು, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶಣೈ ಸದಸ್ಯರಾದ ಮಮತಾ ಕೊಟ್ರೇಶ್, ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ಸಿಂಧೆ ದಂಪತಿಗಳು ಮುಂತಾದವರು ಉಪಸ್ಥಿತರಿದ್ದರು.