ಸುಶ್ರುತ ಮಕ್ಕಳ ಆಸ್ಪತ್ರೆ ಲೋಕಾರ್ಪಣೆ

ಬೆಂಗಳೂರು, ಏ.೧-ಬೆಂಗಳೂರು ಮಹಾನಗರದ ಎರಡನೇ ಸರ್ಕಾರಿ ಮಕ್ಕಳ ಆಸ್ಪತ್ರೆ’ ಎಂಬ ಖ್ಯಾತಿಗೆ ಪಾತ್ರವಾಗಿರುವ “ಸುಶ್ರುತ ಮಕ್ಕಳ ಆಸ್ಪತ್ರೆ’ಯನ್ನು ಬಿಬಿಎಂಪಿ ವತಿಯಿಂದ ಸುಮಾರು ೧೨.೫೦ ಕೋಟಿ ರೂಪಾಯಿಗಳಷ್ಟು ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬಿಬಿಎಂಪಿ ಮಾಜಿ ಸದಸ್ಯೆ ಪೂರ್ಣಿಮಾ ರಮೇಶ್ ಅವರ ಪರಿಶ್ರಮದಿಂದ ಬಿಬಿಎಂಪಿಯ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ನಲ್ಲಿ ಪ್ರಾರಂಭವಾದ ಸುಶ್ರುತ ಮಕ್ಕಳ ಆಸ್ಪತ್ರೆಯು ೧೦ ಪಿಐಸಿಯಿ ಗಳು, ೪೦ ಹಾಸಿಗೆಗಳು ಹಾಗೂ ೩ ಸುಸಜ್ಜಿತವಾದ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಒಳಗೊಂಡ ಆಸ್ಪತ್ರೆಯಾಗಿದೆ.
೩೦೦ ಕ್ಕೂ ಹೆಚ್ಚು ರಕ್ತ ಪರೀಕ್ಷೆಗಳನ್ನು ಮಾಡಬಹುದಾದ ಪ್ರಯೋಗಾಲಯ, ಮೆದುಳು ಶಸ್ತ್ರ ಚಿಕಿತ್ಸೆಯನ್ನೂ ಮಾಡಬಹುದಾದಂತಹ ಅತ್ಯಾಧುನಿಕ ಸಕಲರಣೆಗಳನ್ನು ಒಳಗೊಂಡ ಶಸ್ತ್ರ ಚಿಕಿತ್ಸಾ ಕೊಠಡಿ ಮತ್ತು ಮಹಿಳೆಯರ ಸ್ತನ ಕ್ಯಾನ್ಸರ್ ಸೇರಿದಂತೆ ಬಹಳಷ್ಟು ಮಾರಣಾಂತಿಕ ಕಾಯಿಲೆಗಳನ್ನು ಪತ್ತೆ ಹಚ್ಚಬಲ್ಲ ಸೌಲಭ್ಯವೂ ಇಲ್ಲಿದೆ.
ರಾಜ್ಯ ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ಶೀಘ್ರವೇ ಘೋಷಣೆ ಮಾಡಲಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇಲ್ಲದೇ ಇರುವ ಕಾರಣದಿಂದಾಗಿ ಯಡಿಯೂರು ವಾರ್ಡ್ ನಾಗರಿಕರ ವೇದಿಕೆ ವತಿಯಿಂದಲೇ ಸುಶ್ರುತ ಮಕ್ಕಳ ಆಸ್ಪತ್ರೆಯ ಉದ್ಘಾಟನೆಯನ್ನು ಮಾಡಲಾಯಿತು.


ನಗರದ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಸಂದರ್ಭಗಳಲ್ಲಿ ಐಸಿಯು ಸೌಲಭ್ಯ ಒದಗಿಸಲು ದಿನವೊಂದಕ್ಕೆ ಕನಿಷ್ಠ ೮೦,೦೦೦ ರೂ. ಗಳಿಂದ ಒಂದು ಲಕ್ಷ ರೂ. ಗಳವರೆಗೆ ದುಬಾರಿ ಶುಲ್ಕ ವಿಧಿಸುತ್ತಿರುವ ಕಾರಣದಿಂದಾಗಿ, ಬಡ ಕುಟುಂಬಗಳ ಜನರಿಗೆ ಇಷ್ಟೊಂದು ದುಬಾರಿ ಮೊತ್ತವನ್ನು ಪಾವತಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಹೆಚ್ಚು ಸಾವು, ನೋವುಗಳು ಸಂಭವಿಸುತ್ತಿವೆ.
ಹಾಗೆಯೇ ೧೪೦ ಲಕ್ಷ ಜನಸಂಖ್ಯೆ ಹೊಂದಿರುವ ಬೆಂಗಳೂರು ಮಹಾನಗರದಲ್ಲಿ “ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ’ಯನ್ನು ಹೊರತುಪಡಿಸಿ ಮತ್ತೊಂದು ಸರ್ಕಾರೀ ಸ್ವಾಮ್ಯದ ಆಸ್ಪತ್ರೆ ಇಲ್ಲದಿರುವ ಕಾರಣದಿಂದ ದಿನವೊಂದಕ್ಕೆ ಕೇವಲ ೫೦೦ ರೂ. ಗಳಷ್ಟು ಅತೀ ಕಡಿಮೆ ವೆಚ್ಛದಲ್ಲಿ ಮಕ್ಕಳಿಗೆ ಹಾಗೂ ನಿಗದಿತ ಅವಧಿಗೆ ಮುನ್ನವೇ ಜನಿಸುವ ಮಕ್ಕಳು ಮತ್ತು ತಾಯಂದಿರಿಗೆ ಅತ್ಯುತ್ತಮ ಗುಣಮಟ್ಟದ ಐಸಿಯು ಸೌಲಭ್ಯಗಳನ್ನು ಒಳಗೊಂಡ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಬೇಕೆಂಬ ಸದುದ್ದೇಶದಿಂದ ಸುಶ್ರುತ ಮಕ್ಕಳ ಆಸ್ಪತ್ರೆ ಯನ್ನು ಪಾಲಿಕೆ ವತಿಯಿಂದ ನಿರ್ಮಿಸಲಾಗಿದೆ.
ಉದ್ಘಾಟನೆ ಸಮಾರಂಭದಲ್ಲಿ ನಿವೃತ್ತ ಐಟಿಎಸ್ ಅಧಿಕಾರಿ ಎನ್.ಎಸ್. ರಾಮಚಂದ್ರ,ಯಡಿಯೂರು ವಾರ್ಡ್ ನಾಗರೀಕರ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು.