ಸುಶೀಲ್ ಮೋದಿ ಐ ಮಿಸ್ ಯು

ಪಾಟ್ನಾ,ನ.೧೭- ಐ ಮಿಸ್ ಯು ಸುಶೀಲ್ ಮೋದಿ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಬಿಹಾರದ ಉಪ ಮುಖ್ಯಮಂತ್ರಿ ಹುದ್ದೆ ಸುಶೀಲ್ ಮೋದಿ ಅವರ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್ ಅವರು ಸುಶೀಲ್ ಮೋದಿ ಅವರನ್ನು ನಾನು ಮಿಸ್ ಮಾಡಿಕೊಂಡಿದ್ದೇನೆ. ಆದರೆ ಇದು ಬಿಜೆಪಿಯ ನಿರ್ಧಾರ ಎಂದು ಅವರು ಹೇಳಿದರು.
ಬಿಹಾರ ಸಚಿವ ಸಂಪುಟದಲ್ಲಿ ಸುಶೀಲ್ ಮೋದಿ ಅವರು ಇಲ್ಲದಿರುವುದು ನಿಮಗೆ ಸರಿಹೋಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್ ಇದು ಬಿಜೆಪಿಯ ನಿರ್ಧಾರ ಎಂದು ಹೇಳಿ ಬಿಜೆಪಿಯ ನಾಯಕರ ತೀರ್ಮಾನದಂತೆ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗಿದೆ ಎಂದಿದ್ದಾರೆ.
ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದ ಸುಶೀಲ್ ಮೋದಿ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದು, ನಿತೀಶ್ ಕುಮಾರ್ ಸಂಕಷ್ಟಕ್ಕೆ ಸಿಲುಕಿ ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಗುರಿಯಾದ ಸಂದರ್ಭಗಳಲ್ಲೆಲ್ಲ ಅವರ ನೆರವಿಗೆ ಧಾವಿಸುತ್ತಿದ್ದರು.
ಬಿಹಾರದ ಉಪ ಮುಖ್ಯಮಂತ್ರಿ ಹುದ್ದೆಯಿಂದ ವಂಚಿತರಾಗಿರುವ ಸುಶೀಲ್ ಮೋದಿ ಅವರಿಗೆ ಕೇಂದ್ರದ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.