ಸುಶಿಕ್ಷಿತರಿಂದ ಸುಂದರ ಸಮಾಜ ನಿರ್ಮಾಣ

ಚಿತ್ರದುರ್ಗ.ನ.೧೭: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಅಗತ್ಯ ಎಂದು ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ತಿಳಿಸಿದರು. ನಗರದ ಡಯಟ್‌ನಲ್ಲಿ ಪಿ.ಎಸ್.ಟಿ.ಇ ವಿಭಾಗದ ವತಿಯಿಂದ ಆಯೋಜಿಸಿದ್ದ ನಲಿಕಲಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರತಿ ಮಗುವಿನಲ್ಲಿಯೂ ಕಲಿಯುವ ಅಗಾಧ ಶಕ್ತಿ ಇದ್ದು ಬಾಲ್ಯದಲ್ಲಿ 6 ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಇರುತ್ತದೆ. ಭಾಷೆ ಕಲಿಕೆಯಲ್ಲಿ ಪರಿಪೂರ್ಣ ಬೆಳವಣಿಗೆಯಾದಾಗ ಇತರೆ ವಿಷಯಗಳನ್ನು ಸುಲಭವಾಗಿ ಕಲಿಯುತ್ತದೆ. ಮಗು ಸಂತಸದಾಯಕವಾಗಿ ಕಲಿಯಲು ನಲಿಕಲಿ ವಿಧಾನ ಸೂಕ್ತವಾಗಿದ್ದು, ಪ್ರಶಿಕ್ಷಣಾರ್ಥಿಗಳು ನಲಿಕಲಿ ಬೋಧನೆಯ ಎಲ್ಲ ಆಯಾಮಗಳನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷಕರು ಮಕ್ಕಳಿಗೆ ಕಲಿಕೆಯನ್ನು ಅನುಕೂಲಿಸುವವರಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಮೊಳಕಾಲ್ಮೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಶ್ರದ್ಧೆ, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಭವಿಷ್ಯ ಜೀವನದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ನಲಿಕಲಿ ಪದ್ಧತಿಯು ಮಕ್ಕಳಿಗೆ ಯಶಸ್ವಿ ಕಲಿಕಾ ವಿಧಾನವಾಗಿದ್ದು ಈ ತರಗತಿಯಲ್ಲಿ ಬೋಧಿಸುವ ಶಿಕ್ಷಕರಿಗೆ ಆನಂದ ದೊರೆಯುತ್ತದೆ. ಬಾಲ್ಯ ಹಂತದಲ್ಲಿರುವ ಮಕ್ಕಳಿಗೆ ಬೋಧಿಸುವದರಿಂದ ಆತ್ಮ ತೃಪ್ತಿ ಮತ್ತು ಸಂತಸ ಉಂಟಾಗುತ್ತದೆ. ಜೀವನ ಕೌಶಲಗಳನ್ನು ತಿಳಿಸುವುದರ ಮೂಲಕ ಮೌಲ್ಯಪ್ರಜ್ಞೆ ಬೆಳೆಸಬೇಕು ಎಂದರು. ರಾಜ್ಯಮಟ್ಟದ ನಲಿಕಲಿ ಸಂಪನ್ಮೂಲ ವ್ಯಕ್ತಿ ರಾಜು ಇಜಾರಿ ನಲಿಕಲಿ ಬೋಧನೆ ಮತ್ತು ತರಗತಿ ನಿರ್ವಹಣೆ ಕುರಿತು ತರಬೇತಿ ನೀಡಿದರು. ಪಿ.ಎಸ್.ಟಿ.ಇ ನೋಡಲ್ ಅಧಿಕಾರಿ ಈ. ಹಾಲಮೂರ್ತಿ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಎಂ.ರಂಗನಾಥ್, ಎಂ.ವಿ.ಶೋಭಾರಾಣಿ ಇದ್ದರು.