
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಆ.04: ಎಲ್ಲರೂ ಸರ್ಕಾರಿ ಹುದ್ದೆಯ ನಿರೀಕ್ಷೆ ಇಟ್ಟುಕೊಳ್ಳದೇ ಸುಶಿಕ್ಷಿತರಾಗಿ, ಸ್ವಾವಲಂಬಿಗಳಾಗಿ ಬದುಕಿ ಸಮಾಜಕ್ಕೆ ಮಾದರಿ ಕೆಲಸಗಳನ್ನು ಮಾಡಿ ಎಂದು ಅರಳಿಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಅವರು ಪಟ್ಟಣದ ಪ್ರಿಯದರ್ಶಿನಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿ.ಯು.ಸಿ.ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಎನ್.ಎಸ್.ಎಸ್. ದೈನಂದಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿನಿಯರಿಗೆ ಆಶೀರ್ವಚನ ನೀಡಿದರು.
ಜೀವನದಲ್ಲಿ ಕಲಿಕೆಯ ಹಂಬಲ ಇನ್ನಷ್ಟು ಮತ್ತಷ್ಟು ವಿದ್ಯಾರ್ಥಿಗಳಲ್ಲಿ ಬರಬೇಕು. ಕಲಿಕೆಯ ನಂತರ ಜಗತ್ತಿನಲ್ಲಿ ತಮ್ಮದೇ ಛಾಪನ್ನು ಮೂಡಿಸುವ ಛಲ ಇರಬೇಕು. ಒಂದು ವೇಳೆ ನಿಮಗೆ ಯಾರಾದರೂ ಕೇಡುಬಯಸಿಸದರೆ, ಅವರಿಗೆ ನೀವು ಕೂಡ ಕೇಡು ಬಯಸಿ ದ್ವೇಷ ಸಾಧನೆಗೆ ಮುಂದಾಗಬೇಡಿ ಎಂದು ಸಲಹೆ ಮಾಡಿದರು. ವಿದ್ಯಾರ್ಥಿಗಳಿಗೆ ಇಂದಿನ ದಿನಮಾನಗಳಲ್ಲಿ ಕಲಿಯಲು ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಸಾಧಿಸಿ ಸಮಾಜದಲ್ಲಿ ನಿಮ್ಮ ಇರುವಿಕೆಯನ್ನು ಗುರುತಿಸಿ ಎಂದು ಸಲಹೆ ಮಾಡಿದರು.
ಪಟ್ಟಣ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿ.ಎಸ್.ಐ. ಬೀಬಿ ಮರೇಮ್ ಮಾತನಾಡಿ, ವಿದ್ಯಾಭ್ಯಾಸ ನಮ್ಮ ಬದುಕಿನ ಒಂದು ಹಂತವಾಗಿದೆ. ಎಸ್.ಎಸ್.ಎಲ್.ಸಿ.ಯ ನಂತರವೇ ನಮ್ಮಗಳ ಭವಿಷ್ಯ ತೆರೆದುಕೊಳ್ಳುತ್ತದೆ. ಆದ್ದರಿಂದ ಪಿ.ಯು.ಸಿ ವಿದ್ಯಾರ್ಥಿಗಳು, ಸತತ ಅಭ್ಯಾಸದಿಂದ ವಿದ್ಯಾಭ್ಯಾಸ ಪಡೆದು, ಮಾದರಿ ಜೀವನ ರೂಪಿಸಿಕೊಳ್ಳಿ ಎಂದರು. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕವಾಗಿಯೂ ವಿಕಾಸರಾಗುವಂತೆ ಸಲಹೆ ಮಾಡಿದರು.
ಪದವಿ ಕಾಲೇಜಿನ ಪ್ರಾಚಾರ್ಯ ಪಕ್ಕೀರಪ್ಪ, ಉಪನ್ಯಾಸಕ ಪರಶುರಾಮ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಅಶೋಕ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ, ಉಪನ್ಯಾಸಕ ರಾಮಚಂದ್ರ ಪೂಜಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಳೆದ ಸಾಲಿನ ದ್ವಿತೀಯ ಪಿ.ಯು.ಸಿ.ಯಲ್ಲಿ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕಪಡೆದ ಕಲಾ ವಿಭಾಗದ ಮಾಯಾ ಮತ್ತು ವಾಣಿಜ್ಯವಿಭಾಗದ ಉಮಾದೇವಿರವರಿಗೆ ಪುರಸ್ಕರಿಸಲಾಯಿತು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕರಿಬಸಮ್ಮ, ಉಮ್ಮಿ ಐಮನ್, ಉಷಾ ಹಾಗೂ ಕಸ್ತೂರಿ ನಿರ್ವಹಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.