ಸುಶಾಂತ್ ಸಿಂಗ್ ಗೆಳತಿ ರಿಯಾ ವಿರುದ್ಧ ಎಫ್‌ಐಆರ್


ಬೆಂಗಳೂರು, ಜು ೨೯- ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಪಾಟ್ನಾ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಕಳೆದ ಜೂನ್ ೧೪ರಂದು ಮುಂಬೈನ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ನಂತರ ಅವರ ಸಾವಿನ ಸುತ್ತ ಹಲವಾರು ಅನುಮಾನಗಳು ಮೂಡಿದ್ದವು. ಈಗ ಸುಶಾಂತ್ ಸಾವನ್ನಪ್ಪಿ ಒಂದು ತಿಂಗಳ ನಂತರ ಅವರ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿರುವುದು ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪಾಟ್ನಾ ಸೆಂಟ್ರಲ್ ವಲಯದ ಇನ್ಸ್ ಪೆಕ್ಟರ್ ಜನರಲ್ ಸಂಜಯ್ ಸಿಂಗ್ ತಿಳಿಸಿದ್ದಾರೆ. ಈಗ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬ, ರಿಯಾ ಚಕ್ರವರ್ತಿಯೇ ಸುಶಾಂತ್‌ಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾಳೆ. ಆಕೆ ಆತನಿಗೆ ಆರ್ಥಿಕವಾಗಿ ಮೋಸ ಮಾಡಿದ್ದಾಳೆ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಇತ್ತೀಚೆಗೆ ತನ್ನ ಪ್ರಿಯಕರನ ಸಾವಿನ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದ ರಿಯಾ ಚಕ್ರವರ್ತಿ, ಸುಶಾಂತ್ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನೀಡಬೇಕು. ಈ ಪ್ರಕರಣ ಯಾವುದೇ ಲೋಪದೋಷವಿಲ್ಲದೇ ತನಿಖೆ ಆಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಬೇಡಿಕೆ ಇಟ್ಟಿದ್ದರು. ಇದಾದ ಬಳಿಕ ಈ ವಿಚಾರವಾಗಿ ಮಾತನಾಡಿದ್ದ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್, ಸುಶಾಂತ್ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.