ಸುಶಾಂತ್ ಪ್ರಕರಣ; ಇನ್ನೂ ಪತ್ತೆಯಾಗದ ರಿಯಾ ಚಕ್ರವರ್ತಿ


ಪಾಟ್ನಾ/ಮುಂಬೈ ಆ 2- ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ ಶನಿವಾರ ಬಿಹಾರ ವಿಶೇಷ ಪೊಲೀಸ್ ತಂಡ ಮುಂಬೈಗೆ ತೆರಳಿದೆ ಎಂದು ಡಿಜಿಪಿ ಗುಪ್ತೇಶ್ವರ ಪಾಂಡೆ ತಿಳಿಸಿದ್ದಾರೆ.
ವಿಶೇಷ ತಂಡ ಸುಶಾಂತ್ ಸಾವಿಗೆ ಸಂಬಂಧಿಸಿದ ಹಲವು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಸುಶಾಂತ್ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಸಂಬಂಧಿಕರನ್ನು ವಿಚಾರಣೆಗೊಳಪಡಿಸಿ ಆತ್ಮಹತ್ಯೆಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ನಾಲ್ಕು ಸದಸ್ಯರ ವಿಶೇಷ ಪೊಲೀಸ್ ತಂಡ ಸುಶಾಂತ್ ಅವರ ಸಹೋದರಿ, ಮಾಜಿ ಗೆಳತಿ ಅಂಕಿತಾ ಲೋಖಂಡೆ, ಅಡುಗೆಕೆಲಸದ ವ್ಯಕ್ತಿ ಹಾಗೂ ಮುಂಬೈನ ಹಲವು ಸ್ನೇಹಿತರಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಆದರೆ ರಿಯಾ ಚಕ್ರವರ್ತಿ ಎಲ್ಲಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆಕೆ ಇರುವ ಸ್ಥಳ ಇನ್ನೂ ಪತ್ತೆಯಾಗಿಲ್ಲ
ಅದೇ ರೀತಿ ಸುಶಾಂತ್ ಬ್ಯಾಂಕ್ ಬ್ಯಾಲೆನ್ಸ್, ವಹಿವಾಟಿನ ಮಾಹಿತಿಯನ್ನು ಬ್ಯಾಂಕಿನಿಂದ ತೆಗೆದುಕೊಳ್ಳಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ. ಬಿಹಾರ ಪೊಲೀಸರಿಗೆ ಸುಶಾಂತ್ ಪ್ರಕರಣವನ್ನು ತನಿಖೆ ನಡೆಸಿ ಭೇದಿಸುವ ಸಾಮರ್ಥ್ಯವಿದ್ದು, ಸುಶಾಂತ್ ಕುಟುಂಬ ಸದಸ್ಯರಿಗೆ ನ್ಯಾಯ ಒದಗಿಸಲಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣದ ವಿಚಾರಣೆಯನ್ನು ಬಿಹಾರದಿಂದ ಮುಂಬೈ ಪೊಲೀಸರಿಗೆ ಹಸ್ತಾಂತರಿಸುವಂತೆ ಕೋರಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಜೂನ್ ೧೪ ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ತನಿಖೆಯಲ್ಲಿ ಹಲವು ಸಂಚಲನ ವಿಷಯಗಳು ಹೊರಬರುತ್ತಿವೆ. ಸುಶಾಂತ್ ಅವರ ಬ್ಯಾಂಕ್ ಖಾತೆಯಿಂದ ರಿಯಾ ಚಕ್ರವರ್ತಿ ೧೫ ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ಸುಶಾಂತ್ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.