ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಟ್ವಿಸ್ಟ್: ತನಿಖೆ ಪೂರ್ಣಗೊಂಡಿಲ್ಲ ಸಿಬಿಐ


ಮುಂಬೈ, ಅ 15– ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಪ್ರಕರಣ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಕೊಳ್ಳಲಾಗಿಲ್ಲ ಎಂದು ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆ ಮುಂದುವರಿಸಿದೆ. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿರುವುದಾಗಿ ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾಗುತ್ತಿವೆ. ಇವೆಲ್ಲವೂ ಸುಳ್ಳು ಹಾಗೂ ಊಹಾಪೋಹಗಳು ಎಂದು ಸಿಬಿಐ ಹೇಳಿದೆ.
ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ. ಶೀಘ್ರದಲ್ಲೇ ಬಿಹಾರ ನ್ಯಾಯಾಲಯದಲ್ಲಿ ತನ್ನ ತನಿಖಾ ವರದಿ ಸಲ್ಲಿಸಲಿದೆ ಎಂದು ಮಾಧ್ಯಮಗಳು ಮಾಡಿರುವ ವರದಿಗಳನ್ನು ಸಿಬಿಐ ಖಂಡಿಸಿದೆ.

ಜೂನ್ 14 ರಂದು ಬಾಂದ್ರಾದ ತನ್ನ ನಿವಾಸದಲ್ಲಿ ಸುಶಾಂತ್ ಸಿಂಗ್ ರಾಜಪುತ್ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಮೃತಪಟ್ಟಿದ್ದರು. ಈ ಸಾವಿನ ಬಗ್ಗೆ ಆತನ ಗೆಳತಿ ರಿಯಾ ಚಕ್ರವರ್ತಿ, ಆಕೆಯ ಪೋಷಕರು ವಹಿಸಿದ್ದ ಪಾತ್ರದ ಬಗ್ಗೆ ಸುಶಾಂತ್ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸುಶಾಂತ್ ಸಾವು ಆತ್ಮಹತ್ಯೆ ಎಂದು ದೆಹಲಿಯ ಏಮ್ಸ್ ವೈದ್ಯರ ನಿರ್ಣಯಿಸಿದ್ದಾರೆ.
ಮಾದಕವಸ್ತು ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಹಾಗೂ ಇತರರನ್ನು ಬಂಧಿಸಿದೆ. ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ರಿಯಾ ಅವರನ್ನು ಇತ್ತೀಚೆಗೆ ಬಾಂಬೆ ಹೈಕೋರ್ಟ್ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಿದೆ.