ಸುವೇಂದು ಅಧಿಕಾರಿ ವಿರುದ್ಧ ಕೇಸ್

ಕಾಂತಿ(ಪಶ್ಚಿಮ ಬಂಗಾಳ)ಜೂ.7-ಲಕ್ಷಾಂತರ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕಳವು ಮಾಡಿದ ಆರೋಪದಡಿ ಬಿಜೆಪಿ ಶಾಸಕ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಕಾಂತಿ ಪುರಸಭೆ ಕಚೇರಿಯಿಂದ ಲಕ್ಷಾಂತರ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕಳವು ಮಾಡಿದ ಸಂಬಂಧ ಜೂನ್‌ 1 ರಂದು ಕಾಂತಿ ಪುರಸಭೆ ಆಡಳಿತ ಮಂಡಳಿಯ ಸದಸ್ಯ ರತ್ನಾದೀಪ್ ಮನ್ನಾ ಅವರು ದೂರು ಸಲ್ಲಿಸಿದ್ದರು.
ಈ ದೂರಿನ ಆಧಾರದ ಮೇರೆಗೆ ನಾಯಕರಿಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ಮೇ 29ರಂದು ಕಾಂತಿ ಪುರಸಭೆ ಕಚೇರಿಯಿಂದ ಯಸ್‌ ಚಂಡಮಾರುತಕ್ಕೆ ಸಂಬಂಧಿಸಿದ ಸುಮಾರು ಎರಡು ಲಕ್ಷ ಮೌಲ್ಯದ ಪರಿಹಾರ ಸಾಮಗ್ರಿಗಳು ಕಳವಾಗಿದ್ದವು.
ಈ ಸಂಬಂಧ ಇಲ್ಲಿಯವರೆಗೆ ಇಬ್ಬರನ್ನು ಬಂಧಿಸಲಾಗಿದೆ. ಈ ಆರೋಪಿಗಳಿಬ್ಬರು, ಸುವೇಂದು ಮತ್ತು ಸೌಮೇಂದು ಅವರು ತಮಗೆ ಪರಿಹಾರ ಸಾಮಾಗ್ರಿಗಳನ್ನು ಕದಿಯಲು ನಿರ್ದೇಶನ ನೀಡಿದ್ದರು ಎಂದು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪರ್ಬಾ ಮದಿನಿಪುರ ಜಿಲ್ಲಾ ಪೊಲೀಸರು ಹೇಳಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸುವೇಂದು ಮತ್ತು ಸೌಮೇಂದು ಅವರ ತಂದೆ, ಸಂಸದ ಸಿಸಿರ್‌ ಅಧಿಕಾರಿ ಅವರು,‘ ಇದು ತೃಣಮೂಲ ಕಾಂಗ್ರೆಸ್‌ನ ಷಡ್ಯಂತ್ರ’ ಎಂದಿದ್ದಾರೆ.