ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ರೂಪು ರೇಷೆ ಸಿದ್ದಪಡಿಸಲು ಸೂಚನೆ

ಗದಗ, ಅ 10 : ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸುವರ್ಣ ಸಂಭ್ರಮದ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಆಯೋಜಿಸಲು ರೂಪುರೇಷೆಗಳನ್ನು ಸಿದ್ದಪಡಿಸುವಂತೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೇ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ನಾಮಕರಣಕ್ಕೆ 50 ವರ್ಷ ಪೂರೈಸಿದರ ಹಿನ್ನಲೆಯಲ್ಲಿ ಆಯೋಜಿಸಲಾಗುವ ಸುವರ್ಣ ಸಂಭ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ ನಾಮಕರಣಕ್ಕೆ 50 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಸಂಭ್ರಮ ಆಚರಿಸಲಾಗುತ್ತಿದೆ. 50 ವರ್ಷಗಳ ಹಿಂದೆ ನಗರದ ಕಾಟನ ಸೇಲ್ ಸೋಸೈಯಟಿ ಆವರಣದಲ್ಲಿ ಜರುಗಿದ ಐತಿಹಾಸಿಕ ಸಮಾವೇಶವನ್ನು ಮೆಲುಕು ಹಾಕುವದರ ಜೊತೆಗೆ ಸ್ವರ್ಣ ಮಹೋತ್ಸವ ಆಚರಣೆ ಯಶಸ್ವಿಗೊಳಿಸಲು ಅಧಿಕಾರಿಗಳು ವಿಶೇಷ ಮುತುವರ್ಜಿಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ನವೆಂಬರ 3 ರಂದು ಜರುಗಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾದ ಶ್ರೀ.ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳನ್ನು ಹಂಪಿಯಿಂದ ಗದುಗಿಗೆ ಗೋಲ್ಡನ್ ಚಾರಿಯೆಟ್ ರೈಲಿನ ಮೂಲಕ ಕರೆತರಲು ಚಿಂತಿಸಲಾಗುತ್ತಿದೆ. ನ.03 ರಂದು ಗದುಗಿಗೆ ಆಗಮಿಸುವ ಮುಖ್ಯಮಂತ್ರಿಗಳು ವೀರನಾರಾಯಣ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಜ್ಯೋತಿಯೊಂದಿಗೆ ಮೆರವಣಿಗೆ ಮೂಲಕ ನಗರದ ಕಾಟನ ಸೇಲ್ ಸೊಸೈಯಟಿಗೆ ಆಗಮಿಸಲು ಉದ್ದೇಶಿಸಲಾಗಿದೆ. ಈ ಹಿನ್ನಲೆಯಲ್ಲಿ ನಗರದ ಸುಂದರೀಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಈಗಿನಿಂದಲೇ ಕಾರ್ಯಪ್ರವತ್ತರಾಗಬೇಕು.
ವೀರನಾರಾಯಣ ದೇವಸ್ಥಾನದಿಂದ ಹೊರಡುವ ಮೆರವಣಿಗೆಯನ್ನು ಮೈಸೂರು ದಸರಾ ಮಾದರಿಯಲ್ಲಿ ಅಂಬಾರಿ ಮೇಲೆ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಆಯೋಜಿಸುವದರ ಜೊತೆಗೆ ಮೆರವಣಿಗೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಕಾರ್ಯಕ್ರಮದ ಸ್ಥಳದವರೆಗೆ ಕರೆತರಲು ಚಿಂತಿಸಲಾಗುವುದು. ಮೆರವಣಿಗೆ ಜೊತೆಗೆ ಉತ್ತಮ ಸಾಂಸ್ಕøತಿಕ ಕಲಾ ತಂಡಗಳ ಆಯ್ಕೆ ಮಾಡಬೇಕು.
ಈ ಸುವರ್ಣ ಸಂಭ್ರಮದ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡುವದರ ಜೊತೆಗೆ ಕಾರ್ಯಕ್ರಮದ ರೂಪುರೇಷೆಗಳನ್ನು ತಯಾರಿಸಬೇಕು. ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಪುಸ್ತಕಗಳ ಬಿಡುಗಡೆ ಜೊತೆಗೆ ಪ್ರವಾಸೊದ್ಯಮ ದೃಷ್ಟಿಯಿಂದ ಹೊಸ ಸೃಷ್ಟಿಗಳನ್ನು ತರುವಂತೆ ತಿಳಿಸಿದರು.
ಈ ಕಾರ್ಯಕ್ರಮದ ನೈಜ ಸಂಭ್ರಮ ಹೆಚ್ಚಿಸಲು ಸಾರ್ವಜನಿಕರು, ಯುವಕರು, ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಅಗತ್ಯದ ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮದ ಕುರಿತು ವೈಜ್ಞಾನಿಕವಾಗಿ ಹಾಗೂ ಅರ್ಥಪೂರ್ಣವಾಗಿ ಪ್ರಚಾರ ಕೈಗೊಳ್ಳಬೇಕು. ಕಾರ್ಯಕ್ರಮಕ್ಕೆ ಕಡಿಮೆ ಸಮಯವಕಾಶವಿದ್ದು ಈ ಕಡಿಮೆ ಅವಧಿಯಲ್ಲಿ ಕರ್ನಾಟಕ ನಾಮಕರಣಕ್ಕೆ 50 ವರ್ಷ ಸುವರ್ಣ ಸಂಭ್ರವವನ್ನು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡಲು ಸಚಿವ ಎಚ್.ಕೆ.ಪಾಟೀಲ ಸೂಚಿಸಿದರು. ಸಭೆ ಆರಂಭಕ್ಕೂ ಮುನ್ನ ಸಚಿವರಾದ ಎಚ್.ಕೆ.ಪಾಟೀಲ ಅವರು 50 ವರ್ಷಗಳ ಹಿಂದೆ ಕರ್ನಾಟಕ ನಾಮಕರಣಕ್ಕೆ ಗದುಗಿನ ಪಾತ್ರದ ಕುರಿತ ಇತಿಹಾಸವನ್ನು ಮೆಲಕು ಹಾಕಿದರು.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.