ಸುವರ್ಣ ಗ್ರಾಮ ಯೋಜನೆ ಪುನರ್ ಆರಂಭಕ್ಕೆ ಚಿಂತನೆ: ಸವದಿ

ಬೀದರ:ನ.21: ಹಿಂದುಳಿದ ಗ್ರಾಮಗಳ ಅಭಿವೃದ್ಧಿ ಹಿನ್ನಲೆಯಲ್ಲಿ ಸ್ಥಗಿತಗೊಂಡಿರುವ ಸುವರ್ಣ ಗ್ರಾಮ ಯೋಜನೆಯನ್ನು ಪುನರಾರಂಭಿಸುವ ಚಿಂತನೆ ಮುಖ್ಯಮಂತ್ರಿಗಳು ಹೊಂದಿದ್ದಾರೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಬಸವಕಲ್ಯಾಣ ತಾಲೂಕಿನ ಕೌಡಿಯಾಳ ಬಳಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಾವು ಕಲಬುರಗಿ ಉಸ್ತುವಾರಿ ಸಚಿವರಾಗಿದ್ದ ವೇಳೆ ಸಚಿವ ಸಂಪುಟ ಸಭೆಯಲ್ಲಿ ಯಾದಗಿರಿ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿ ಸುವರ್ಣ ಗ್ರಾಮ ಯೋಜನೆಯಡಿ 200 ಗ್ರಾಮಗಳನ್ನು ಆಯ್ಕೆಮಾಡಿ, ಪ್ರತಿ ಗ್ರಾಮಕ್ಕೆ ತಲಾ 1 ಕೋಟಿ ನೀಡಲಾಗಿತ್ತು. ಬಳಿಕ ಎರಡನೇ ಬಾರಿಯೂ 200 ಗ್ರಾಮಗಳನ್ನು ಆಯ್ಕೆ ಮಾಡಿ, 200 ಕೋಟಿ ಗ್ರಾಮಗಳ ಅಭಿವೃದ್ಧಿಗಾಗಿ ನೀಡಲಾಗಿತ್ತು ಎಂದರು.
ಬಜೆಟ್‌ನಲ್ಲಿ 4000 ಹೊಸ ಬಸ್ ಖರೀದಿಸುವ ಕುರಿತು ಘೋಷಿಸಲಾಗಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಕೇವಲ ಶೇ. 37 ರಷ್ಚು ಮಾತ್ರ ರಾಜಸ್ವ ಸಂಗ್ರಹವಾಗಿದೆ. ಹೀಗಾಗಿ, ಹೊಸ ಬಸ್‌ಗಳ ಖರೀದಿಗೆ ಹಿನ್ನಡೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 1000 ಹೊಸ ಬಸ್ ನೀಡುವ ಗುರಿ ಹೊಂದಲಾಗಿತ್ತು, ಶೀಘ್ರವೇ ಹೊಸ ಬಸ್‌ಗಳನ್ನು ನೀಡುವ ಭರವಸೆ ಈಡೇರಿಸುವೆ ಎಂದರು.

ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿ ಸಾರಿಗೆ ಸಿಬ್ಬಂದಿಯ ಶೇ. 30 ರಷ್ಟು ಸಂಬಳ ಕಡಿತ ಮಾಡಲಾಗಿದೆ. ಆದರೆ, ನಮ್ಮಲ್ಲಿ ಸಾರಿಗೆ ಸಿಬ್ಬಂದಿಗೆ ಸಂಪೂರ್ಣ ಸಂಬಳ ನೀಡಲಾಗಿದೆ. ಕೋವಿಡ್ ನಿಂದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ಇಂಧನಕ್ಕೆ ಮಾತ್ರ ಗಳಿಕೆಯ ಸಂಪೂರ್ಣ ಹಣ ಖರ್ಚಾಗುತ್ತಿದೆ. ಹಾಗಾಗಿ ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳ 1.30 ಲಕ್ಷ ಸಿಬ್ಬಂದಿಗೆ 9 ತಿಂಗಳ ಸಂಬಳವನ್ನು 75:25 ರ ಅನುಪಾತದಲ್ಲಿ 1500 ಕೋಟಿ ರೂ. ವೇತನವನ್ನು ಸರ್ಕಾರದಿಂದಲೇ ವಿತರಿಸಲಾಗಿದೆ ಎಂದು ಹೇಳಿದರು.

ಜನವರಿ ತಿಂಗಳ ನಂತರ ಹಣಕಾಸಿನ ವ್ಯವಸ್ಥೆ ಸುಧಾರಣೆಯಾಗುವ ಲಕ್ಷಣಗಳಿವೆ. ನಂತರ ಹೊಸ ಬಸ್‌ಗಳ ಖರೀದಿ ಸೇರಿದಂತೆ ಕಷ್ಟದ ಸಮಯದಲ್ಲೂ ಇಲಾಖೆಯಲ್ಲಿ ಸುಧಾರಣೆ ತಂದು, ಲಾಭದಾಯಕವಾಗಿಸೋಣ ಎಂದ ಸಚಿವ ಸವದಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಲಾರಿಗಳ 2 ತಿಂಗಳ ತೆರಿಗೆಯನ್ನು ಮನ್ನಾ ಮಾಡಲಾಗಿದ್ದು, ಇನ್ನೂ 2 ತಿಂಗಳ ತೆರಿಗೆ ಮನ್ನಾ ಮಾಡುವ ಚಿಂತನೆ ಇದೆ ಎಂದು ಲಾರಿ ಮಾಲೀಕರ ಸಂಘದ ಮನವಿಗೆ ಸ್ಪಂದಿಸಿ ಹೇಳಿದರು.

ಶಾಸಕ ಪಾಟೀಲಗೆ ಒಳ್ಳೆಯ ಕಾಲ ಬರುತ್ತಿದೆ:

ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಕಾಂಗ್ರೆಸ್ಸಿನಲ್ಲಿದ್ದರೂ ನನಗೆ ಅತ್ಯಂತ ಆತ್ಮೀಯರು. ಅವರ ತಂದೆ ದಿ. ಮಾಜಿ ಸಚಿವ ಬಸವರಾಜ ಪಾಟೀಲ ಬಿಜೆಪಿಯಿಂದ ಎಂಎಲ್‌ಸಿ ಆಗಿದ್ದರು. ಡಬ್ಬಿಯಿಂದ ಕರ್ಪೂರ ತೆಗೆದ ಮ್ಯಾಲೂ, ಕರ್ಪೂರದ ಡಬ್ಬಿಯಲ್ಲಿ ಎಷ್ಟೋ ದಿನಗಳ ಕಾಲ ವಾಸನೆ ಇದ್ದೇ ಇರುತ್ತದೆ. ಹೀಗಾಗಿ, ಶಾಸಕ ಪಾಟೀಲರಿಗೆ ಒಳ್ಳೆಯ ಕಾಲ ಬರುತ್ತಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಕೌಡಿಯಾಳ ಬಳಿ ಆರ್‌ಟಿಒ ಕಚೇರಿಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ವೇಳೆ ಸಚಿವ ಸವದಿ ಮಾತಿಗೆ ಪ್ರತಿಕ್ರಿಯಿಸಿದ ಶಾಸಕ ಪಾಟೀಲ ನನಗೀಗ ಒಳ್ಳೆಯ ಕಾಲವೇ ಇದೆ ಎಂದರು. ಇದ್ದಕ್ಕೆ ಅಲ್ಲೇ ಮತ್ತೆ ಪ್ರತಿಕ್ರಿಯಿಸಿದ ಸವದಿ ಅವರು, ಇದಕ್ಕಿಂತಲೂ ಒಳ್ಳೆಯ ಕಾಲ ಬರುತ್ತಿದೆ ಎಂದ ಹೇಳುವ ಮೂಲಕ ನೆರೆದಿದ್ದ ಜನರನ್ನು ನಗೆ ಗಡಲಲ್ಲಿ ತೇಲಿಸಿದರು.

ರಾಜಶೇಖರ ಪಾಟೀಲ್ ಅವರು ಕೆಲವೊಂದು ವಿಚಾರಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಖಂಡಿತ ಅವರಿಗೆ ಬೇಸರ ಆಗದ ರೀತಿಯಲ್ಲಿ ಅವರ ಕ್ಷೇತ್ರದ ಕೆಲಸ ಮಾಡಿಕೊಡುವೆ ಎಂದೂ ಲಕ್ಷ್ಮಣ ಸವದಿ ನುಡಿದರು.