ಸುಳ್ಳು ಹೇಳುವುದೇ ಮೋದಿ ಸಾಧನೆ: ಕೆ.ಎಸ್. ಶಿವರಾಮು

ಸಂಜೆವಾಣಿ ನ್ಯೂಸ್
ಮೈಸೂರು: ಏ.24:- ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುವದನ್ನೇ ಸಾಧನೆ ಮಾಡಿಕೊಂಡಿದ್ದು, ಹಿಂದೂಗಳ ಹೀನಸ್ಥಿತಿಗೆ ಆರ್.ಎಸ್.ಎಸ್ ಮತ್ತು ಬಿಜೆಪಿಯೇ ಕಾರಣ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆಕ್ರೋಶ ವ್ಯಕ್ತಪಡಿಸಿದರು
ಸಮಾನಮನಸ್ಕ ಸಂಘಟನೆಗಳ ವೇದಿಕೆಯಿಂದ ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮು ಸಾಮರಸ್ಯ ಕದಡುವುದನ್ನೇ ರಾಜಕೀಯ ಮಾಡಿಕೊಂಡಿರುವ ಬಿಜೆಪಿ, ಆರ್.ಎಸ್.ಎಸ್ ಹಿಂದೂಗಳ ತಲೆ ಮೇಲೆ ಭೂತದಂತೆ ಕಾಲಿಟ್ಟಿದೆ. ಅಹಿಂದ ವರ್ಗಗಳಿಗೆ, ರಾಜ್ಯದ ತೆರಿಗೆದಾರರಿಗೆ ಚೊಂಬು ನೀಡಿದೆ. ಕೇವಲ ಮಾತನಾಡುವುದೇ ಅವರ ಸಾಧನೆ ಎಂದು ಚೊಂಬುಗಳನ್ನು ಪ್ರದರ್ಶಿಸಿದರು.
ನಗರದ ಹೋಟೆಲ್ ಗುರು ರೆಸಿಡೆನ್ಸಿಯಲ್ಲಿ ಏ.24ರಂದು ಬೆಳಿಗ್ಗೆ 11.30ಕ್ಕೆ ಅಹಿಂದ ಸಂಘಟನೆಗಳ ನೇತೃತ್ವದಲ್ಲಿ ಸಭೆ ಆಯೋಜಿಸಿದ್ದೇವೆ. ಕಾಂಗ್ರೆಸ್ ಗೆಲುವಿಗೆ ವಿವಿಧ ರೀತಿಯ ಕಾರ್ಯಯೋಜನೆ ರೂಪಿಸಿ, ಜಾರಿಗೆ ಸಜ್ಜಾಗಲಿದ್ದೇವೆ ಎಂದು ತಿಳಿಸಿದರು.
ಉಪ್ಪಾರ ಸಮಾಜದ ಮುಖಂಡ ಯೋಗೇಶ್ ಉಪ್ಪಾರ್ ಮಾತನಾಡಿ, ಕೇಂದ್ರದಿಂದ ಬರ ಪರಿಹಾರ ಕೇಳಲು ಸುಪ್ರೀಂ ಕೋರ್ಟ್ ನಿಂದ ಆದೇಶ ತರಬೇಕಾಗಿದೆ. ಇಂಥ ಕೇಂದ್ರ ಸರ್ಕಾರದ ಅಗತ್ಯವೇನು. ಕಾಂಗ್ರೆಸ್ ನುಡಿದಂತೆ ನಡೆದಿದೆ. ಅಧಿಕಾರ ನೀಡಿದರೆ ತನ್ನ ಪ್ರಣಾಳಿಕೆಯ 25 ಅಂಶಗಳನ್ನು ಜಾರಿಗೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಎಂ.ಭಾಸ್ಕರ್, ಎಫ್.ಎಂ.ಕಲೀಂ, ಎ.ಆರ್.ಕಾಂತರಾಜ್, ಎಚ್.ಎಸ್.ಪ್ರಕಾಶ್, ಮೋಗಣ್ಣಾಚಾರ್, ರವಿನಂದನ್, ಲೋಕೇಶ್ ಮಾದಾಪುರ ಇದ್ದರು.