
ಬೀದರ್: ಸೆ.19:ಸುಳ್ಳು ಸುದ್ದಿ ಹಬ್ಬಿಸಿ ರೈತರ ದಾರಿ ತಪ್ಪಿಸುವುದನ್ನು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ನಿಲ್ಲಿಸಬೇಕೆಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಡಿ.ಕೆ ಸಿದ್ರಾಮ ತಿಳಿಸಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಂದ ಕೇವಲ 78 ಕೋಟಿ ಸಾಲ ಮಾತ್ರ ಪಡೆಯಲಾಗಿದೆ. ಅದು ಈಗ ಬಡ್ಡಿ ಎಲ್ಲವೂ ಸೇರಿ 669 _ಕೋಟಿಗೆ ತಲುಪಿರುವುದು ನಿಜ. ಆದರೆ, ಉಸ್ತುವಾರಿ ಸಚಿವರು 880 ಕೋಟಿ ಸಾಲ ಪಡೆದ ಬಗ್ಗೆ ತನಿಖೆ ನಡೆಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಿರುವರು. ಅಧಿಕಾರಿಗಳು ಒಮ್ಮೆ ಏಳು ದಿವಸದಲ್ಲಿ, ನಂತರ ಮೂರು ದಿವಸಗಳಲ್ಲಿ, ಆನಂತರ ಬರೀ ಒಂದು ದಿವಸದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸಂಬಂದಪಟ್ಟವರ ಮೇಲೆ ಒತ್ತಡ ಹಾಕುವ ಮೂಲಕ ಖಂಡ್ರೆಯವರು ನನ್ನನ್ನು ಜೈಲಿಗೆ ಹಾಕುವ ಆತೂರದಲ್ಲಿ ಇದ್ದ ಹಾಗೆ ಕಾಣುತ್ತಿದೆ ಎಂದರು.
ಕಳೆದ 18 ವರ್ಷಗಳ ಹಿಂದೆ ದಿ.ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಮರುಜೀವ ನೀಡಿ ಅದನ್ನು ಉಳಿಸಿಕೊಂಡು ಬಂದರು. ಅವರೆ ಅಧ್ಯಕ್ಷರಿದ್ದಾಗ 78 ಕೋಟಿ ತಂದ ಸಾಲದ ಮೊತ್ತ ಸೇರಿ ಈಗ 669 ಕೋಟಿಗೆ ತಲುಪಿದೆ. ತದನಂತರ ಖಂಡ್ರೆ ಪರಿವಾರದಿಂದ ಎಂ.ಜಿ.ಎಸ್.ಎಸ್.ಕೆ ಕಾರ್ಖಾನೆ ಸ್ಥಾಪಿತವಾಯಿತು. ಅದರ ಸಾಲದ ಮೊತ್ತ ಈಗಾಗಲೇ 400 ಕೋಟಿಗೆ ತಲುಪಿದೆ. ಅದರ ತನಿಖೆ ಯಾವಾಗ ಮಾಡುತ್ತಿರಿ? ಎಂದು ಪ್ರಶ್ನೆ ಮಾಡಿದರು.
ನಾಗಮಾರಪಳ್ಳಿ ಪರಿವಾರವಾದದ ಬಗ್ಗೆ ಈಶ್ವರ ಖಂಡ್ರೆಯವರಿಗೆ ಮಾತನಾಡುವ ನೈತಿಕತೆ ಇಲ್ಲ. ಏಕೆಂದರೆ ಭಾಲ್ಕಿ ಪಟ್ಟದ್ದೆವರು ಹುಟ್ಟಿ ಹಾಕಿದ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ತಮ್ಮ ವಶ ಮಾಡಿಕೊಂಡಿರುವಿರಿ, ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಿಮ್ಮ ತಂದೆ ಹಾಗೂ ನೀವು 20 ವರ್ಷಗಳ ಕಾಲ ನಾಗಮಾರಪಳ್ಳಿಯವರ ಸಹಾಯದಿಂದ ಅಡಳಿತ ಮಂಡಳಿ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದೀರಿ. ನಿಮ್ಮ ಮನೆಯಲ್ಲಿ ನಿಮ್ಮ ತಂದೆ, ನಿಮ್ಮ ಸಹೋದರ ಹಾಗೂ ನೀವು ಶಾಸಕರಾಗಿ ಮಂತ್ರಿಗಳಾಗಿ ಅಧಿಕಾರ ಅನುಭವಿಸಿದ್ದಿರಿ, ಈಗಲೂ ಅನುಭವಿಸುತ್ತಿದ್ದಿರಿ. ಈಗ ತಂದೆ ಸತ್ತ ಮಗ ಉಮಾಕಾಂತ ನಾಗಮಾರಪಳ್ಳಿ ಅವರ ಬೆನ್ನು ಬಿದ್ದಿರುವುದು ನಿಮಗೆ ನಾಚಿಕೆಯಾಗಬೇಕು ಎಂದು ಆರೋಪಿಸಿದರು.
ನಾನು ಅಧ್ಯಕ್ಷನಾದ ಬಳಿಕ ಒಂದು ನಯಾ ಪೈಸೆ ಕಾರ್ಖಾನೆಯ ಹೆಸರಲ್ಲಿ ಸಾಲ ಮಾಡಿಲ್ಲ, ಇದ್ದ ಸಾಲದ ಅಸಲು ಬಡ್ಡಿ ಬೆಳೆದು 669 ಕೋಟಿಗೆ ತಲುಪಿದೆ. ಸಾಲ ಮರುಪಾವತಿಸಲು ಸದ್ಯದ ಮಟ್ಟಿಗೆ ಯಾವ ಕಾರ್ಖಾನೆಗಳಿಂದಲೂ ಸಾಧ್ಯವಾಗುತ್ತಿಲ್ಲ. ಮಾರ್ಚ್ 18 ರಂದು ಹೈಕೋರ್ಟ್ ನಿರ್ದೇಶನದಂತೆ ದಾಸ್ತಾನು ಮಾಡಲಾಗಿದ್ದ 8 ಕೋಟಿ ಮೊತ್ತದ ಸಕ್ಕರೆ ಮಾರಾಟ ಮಾಡಿ ರೈತರ ಹಣ ಪಾವತಿಸಲಾಗಿದೆ. ಈ ಸತ್ಯ ನಮ್ಮ ಕಾರ್ಖಾನೆಯ ಸಾಮಾನ್ಯ ಸಭೆಯಲ್ಲೂ ಚರ್ಚೆ ಮಾಡುವರಿದ್ದೇವೆ. ನಿಮಗೆ ತಾಕತ್ತಿದ್ದರೆ ನೇರವಾಗಿ ನನ್ನೊಂದಿಗೆ ಚರ್ಚೆಗೆ ಸಿದ್ದರಾಗಿ, ನಾನು ಒಳ್ಳೆ ಕೆಲಸ ಮಾಡಿದಕ್ಕೆ ಬಹುಮಾನ ನೀಡಲು ರೆಡಿಯಾಗಿ. ಸುಮ್ಮ ಸುಮ್ಮನೆ ಆರೋಪ ಮಾಡಿ ನನ್ನನ್ನು ಜೈಲಿಗೆ ಹಾಕುವ ಧಮ್ಕಿ ಹಾಕಬೇಡಿ. ರಾಜಕೀಯದಲ್ಲಿ ರಾಜಕೀಯ ಮಾಡಿ, ಕಾರ್ಖಾನೆ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಮಾನಸಿಕವಾಗಿ ವಯಕ್ತಿಕವಾಗಿ ನನಗೆ ಏನಾದರೂ ದುರಂತ ಸಂಭವಿಸಿದರೆ ಅದಕ್ಕೆ ಈಶ್ವರ ಖಂಡ್ರೆ ಅವರೆ ನೇರ ಹೊಣೆ ಹಾಗೂ ಕಾರ್ಖಾನೆ ಏನಾದರೂ ಬಂದ್ ಮಾಡಿಸಿದರೆ ಅದರ ಮೇಲೆ ನಿರ್ಭರರಿರುವ ರೈತರು ಹಾಗೂ ಕಾರ್ಖಾನೆಯ ಕಾರ್ಮಿಕರ ಶಾಪ ತಟ್ಟುವುದರಲ್ಲಿ ಎರಡು ಮಾತಿಲ್ಲ ಎಂದರು. ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶಶಿ ಪಾಟೀಲ ಸಂಗಮ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.