ಬೆಂಗಳೂರು,ಜೂ.೨೦-ಸಾಮಾಜಿಕ ಜಾಲ ತಾಣಗಳಲ್ಲಿ ಮಿತಿಮೀರಿರುವ ಸುಳ್ಳು ಸುದ್ದಿಗಳ ಮೂಲಗಳನ್ನು ಪತ್ತೆ ಹಚ್ಚಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರನ್ನು ಗುರುತಿಸಿ ಕಾನೂನುಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್‌ರವರು ಇಂದು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಿರುವ ಬಗ್ಗೆ ಚರ್ಚೆ ನಡೆಸಿ. ಈ ಸುಳ್ಳು ಸಿದ್ದಿಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
೨೦೧೩ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೂ ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿತ್ತು ಈ ಬಾರಿಯೂ ಕೂಡ ಅದೇ ತಂತ್ರವನ್ನು ರಾಜಕೀಯ ವಿರೋಧಿಗಳು ಅನುಸರಿಸುತ್ತಿದ್ದಾರೆ. ಲೋಕಸಭಾ ಚುನಾವಣೆಗಳು ಬರುತ್ತಿರುವುದರಿಂದ ಸುಳ್ಳು ಸುದ್ದಿಗಳನ್ನು ಹೆಚ್ಚೆಚ್ಚು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನಗಳು ನಡೆಯುವ ಸಾಧ್ಯತೆಗಳಿವೆ. ಹಾಗಾಗಿ. ಸುಳ್ಳು ಸುದ್ದಿಗಳ ಮೂಲವನ್ನು ಪತ್ತೆ ಹಚ್ಚಿ ಅವುಗಳನ್ನು ಬೇರು ಸಮೇತ ಕಿತ್ತೊಗೆಯುವ ಜತೆಗೆ ಸುಳ್ಳು ಸುದ್ದಿ ಹರುಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆಯೂ ಹೇಳಿದರು.
ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಕ್ಕಳ ಕಳ್ಳರು, ಗೋ ಮಾಂಸ ಸಾಗಿಸುವವರು ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸಿದ್ದರು. ಈ ಬಾರಿಯೂ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ಸುಳ್ಳು ಸುದ್ದಿ ವದಂತಿಗಳ ಮೂಲಕ ಗುಂಪು ಹಲ್ಲೆ, ಗಲಭೆಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯಬಹುದು ಎಂಬ ಸುಳಿವು ಸಿಕ್ಕಿದೆ. ಈ ಬಗ್ಗೆ ಎಚ್ಚರ ವಹಿಸಿ ಎಂದು ಮುಖ್ಯಮಂತ್ರಿಗಳು ಗೃಹ ಸಚಿವರ ಜತೆ ಚರ್ಚಿಸುವ ಸಂದರ್ಭದಲ್ಲಿ ಹೆಳಿದರು.
ಸತ್ಯ ಪತ್ತೆಗೆ ತಂಡ ರಚಿಸಿ
ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುಳ್ಳು ಸುದ್ದಿಗಳ ಮೂಲ ಪತ್ತೆ ಹಚ್ಚುವ ತಾಂತ್ರಿಕ ತಂಡ ಕೆಲಸ ಮಾಡುತ್ತಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಇದನ್ನು ಸ್ಥಗಿತಗೊಳಿಸಲಾಗಿದ.ಎ ಈ ತಂಡವನ್ನು ಮತ್ತೆ ರಚಿಸಿ ಸುಳ್ಳು ಸುದ್ದಿಗಳ ಮೂಲವನ್ನು ಪತ್ತೆ ಹಚ್ಚಬೇಕು. ಹಾಗೂ ಈ ಬಗ್ಗೆ ವರದಿ ನೀಡುವಂತೆಯೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.