ಸುಳ್ಳು ಭರವಸೆ ನೀಡುವ ಪ್ರವಾಸ ಕೈಗೊಂಡಿದ್ದಾರೆ ಜಾಧವ

ಅಫಜಲಪುರ:ಸೆ.15:ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಉಮೇಶ ಜಾಧವ್ ಅವರಿಗೆ ಅಫಜಲಪುರ ಮತಕ್ಷೇತ್ರದಲ್ಲೇ 36 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ನೀಡಿದ ಕ್ಷೇತ್ರಕ್ಕೆ ಏನಾದರೂ ವಿಶೇಷ ಕೊಡುಗೆ ನೀಡುತ್ತಾರೆಂಬ ಭರವಸೆ ಇತ್ತು.ಆದರೆ ಇಲ್ಲಿವರೆಗೂ ನಯಾಪೈಸೆಯೂ ಸಹ ಅನುದಾನ ನೀಡದೆ ನಿರ್ಲಕ್ಷ ತೋರಿ ಈಗ ಮತ್ತೆ ಚುನಾವಣೆ ಸಮೀಪ ಬರುತ್ತಿದ್ದಂತೆ ಸುಳ್ಳು ಭರವಸೆ ನೀಡುವ ಪ್ರವಾಸ ಕೈಗೊಂಡಿದ್ದಾರೆ ಎಂದು ತಾಪಂ ಮಾಜಿ ಉಪಾಧ್ಯಕ್ಷರಾದ ಭೀಮಾಶಂಕರ ಹೊನ್ನಕೇರಿ ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ ಸಹ ಮುತುವರ್ಜಿ ವಹಿಸಿ ಬಡಜನರ ಸೇವೆ ಮಾಡಬೇಕಾಗಿದ್ದ ಸಂಸದರು ಇಷ್ಟು ವರ್ಷಗಳ ಕಾಲ ಎಲ್ಲಿ ಹೋಗಿದ್ದರು ಎಂಬುದು ಅವರಿಗೆ ಕೇಳಬೇಕು.ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಸಾವಿರಾರು ಜನ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ.ಪ್ರವಾಹ ಸಂದರ್ಭದಲ್ಲಿ ಒಂದು ಹೊತ್ತಿನ ಊಟಕ್ಕೂ ಸಹ ಪರದಾಡುವಂತೆ ಭೀಕರ ಪರಿಸ್ಥಿತಿ ಉಂಟಾದಾಗ ಬಾರದ ಸಂಸದರು ಈಗ ಏಕೆ ಬರುತ್ತಿದ್ದಾರೆ.ಕಷ್ಟದ ಕಾಲದಲ್ಲಿ ಬಡಜನರ ನೆರವಿಗೆ ಬಾರದೆ ಸಂಸದರಾಗಿ ಮೋಜು ಮಸ್ತಿ ಮಾಡುತ್ತಾ ಕಾಲ ಕಳೆದು ಈಗ ಚುನಾವಣೆಗಳು ಸಮೀಪ ಬರುತ್ತಿದ್ದಂತೆ ಮತ್ತೆ ಕ್ಷೇತ್ರದ ಜನರಿಗೆ ಸುಳ್ಳು ಹೇಳಲು ಬರುತ್ತಿದ್ದಾರೆ.ನೀವು ಸಂಸದರಾದ ನಂತರ ಈ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಿದ್ದೀರಿ ಎಂಬುದು ಮೊದಲು ಬಹಿರಂಗ ಪಡಿಸಿ.ತಾಲೂಕಿನಲ್ಲಿ ಸಾಕಷ್ಟು ರಾಷ್ಟ್ರೀಯ ಹೆದ್ದಾರಿಗಳು ಹಾಳಾಗಿ ದಿನನಿತ್ಯ ಹತ್ತಾರು ಅಪಘಾತಗಳು ಸಂಭವಿಸಿ ಪ್ರಯಾಣಿಕರು ಮೃತಪಡುತ್ತಿದ್ದಾರೆ ಇದು ನಿಮಗೆ ಕಾಣಿಸುವುದಿಲ್ಲವೋ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ 16 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ.ಮೊದಲು ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ವಿತರಿಸಲು ಒತ್ತಡ ಹಾಕಿ ಪರಿಹಾರ ಒದಗಿಸಿ.ಸಾವಿರಾರು ಮನೆಗಳು ಬಿದ್ದಿವೆ ಇದನ್ನು ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಿ ಮನೆ ನಿರ್ಮಾಣ ಮಾಡುವಂತ ಕಾರ್ಯಕ್ಕೆ ಮುಂದಾಗಿ ಅವಾಗ ನಾವೇ ಖುದ್ದಾಗಿ ನಿಮಗೆ ಸ್ವಾಗತ ಕೋರುತ್ತೇವೆ.ಅದನ್ನು ಸಿಟ್ಟು ಕಾಟಚಾರಕ್ಕಾಗಿ ಭೇಟಿ ನೀಡುವುದು ಅವಶ್ಯಕತೆ ಇಲ್ಲ.ಯಾವ ಅಭಿವೃದ್ಧಿ ಕೆಲಸ ಮಾಡಿದ್ದೀರಿ ಎಂದು ಬಂದು ಹೇಳುತ್ತೀರಿ ? ಮೊದಲು ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನರಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಿ ನಂತರ ಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.