ಬ್ಯಾಡಗಿ,ಮಾ.23: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಪ್ಪತ್ತರ ಅರೆವು,ಮರೆವು ಕಾಡುತ್ತಿದೆ. ಹೀಗಾಗಿ ಅಧಿಕಾರದ ಬೆನ್ನು ಹತ್ತಿರುವ ಅವರು ರಾಜ್ಯದ ಜನರಿಗೆ ತಮಗೆ ತಲೆಗೆ ತೋಚಿದ ಸುಳ್ಳು ಭರವಸೆಗಳನ್ನು ನೀಡಲು ಮುಂದಾಗಿದ್ದಾರೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ವ್ಯಂಗ್ಯವಾಡಿದರು.
ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಪಂಚಾಯತ್ ರಾಜ್ ತಾಂತ್ರಿಕ ಉಪವಿಭಾಗದ ವತಿಯಿಂದ 1.40ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಮಾಸಣಗಿ ಕೆರವಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕಳೆದ ಅವಧಿಯಲ್ಲಿ 5ವರ್ಷಗಳ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಾಗೂ 14ತಿಂಗಳುಗಳ ಕಾಲ ಸಮ್ಮಿಶ್ರ ಸರ್ಕಾರದ ಅಧಿಕಾರವಧಿಯಲ್ಲಿ ಯಾವುದೇ ಜನಪರ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರಲ್ಲದೇ, ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ಪರ್ವವನ್ನೇ ಸೃಷ್ಟಿ ಮಾಡಿದೆ ಎಂದರು.
ಪಿಎಲ್’ಡಿ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಶೇಖಪ್ಪ ಅಳಲಗೇರಿ ವಹಿಸಿದ್ದರು. ಉಪಾಧ್ಯಕ್ಷೆ ರೇಣುಕಾ ಪಡಿಯಣ್ಣನವರ, ಸದಸ್ಯರಾದ ನಾಗರಾಜ ಕೊರ್ಲಿ, ಬಸವರಾಜ ಬನ್ನಿಹಟ್ಟಿ, ಮಮತಾ ಕೋಣನವರ, ಶಿವರಾಜ ಬನ್ನಿಹಟ್ಟಿ, ನೇತ್ರಾ ಕಳಕ್ಕನವರ, ಪಾರ್ವತಮ್ಮ ಚಿಕ್ಕಮ್ಮನವರ, ಶಿವಣ್ಣ ಕುಮ್ಮೂರ, ಪುರಸಭಾ ಸದಸ್ಯ ವಿನಾಯಕ ಹಿರೇಮಠ, ಚನಬಸ್ಸು ವೀರನಗೌಡ್ರ, ಗುತ್ತಿಗೆದಾರ ಎಂ.ಎನ್.ಹೊಸಗೌಡ್ರ, ಮುನ್ನಾ ಮಾಳಗಿಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.