ಸುಳ್ಳು ದಾಖಲೆ ಸೃಷ್ಟಿಸಿ ಜೀವಂತವಿರುವ ಮಹಿಳೆ ಹೆಸರಲ್ಲಿ ಮರಣ ಪ್ರಮಾಣ ಪತ್ರ !

ಕಲಬುರಗಿ,ಜೂ.19-ಸುಳ್ಳು ದಾಖಲೆ ಸೃಷ್ಟಿಸಿ ಜೀವಂತ ಇರುವ ಮಹಿಳೆಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆಯುವುದರ ಮೂಲಕ ಇಲ್ಲಿನ ಮಹಾನಗರ ಪಾಲಿಕೆಯ ಅಧಿಕಾರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಸುಳ್ಳು ಮಾಹಿತಿ ಮತ್ತು ಸುಳ್ಳು ಪಂಚರನ್ನು ಸೃಷ್ಟಿಸಿ ಜೀವಂತ ಇರುವ ಮಹಿಳೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆಯಲಾಗಿದ್ದು, ಈ ಸಂಬಂಧ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಅವಿನಾಶಕುಮಾರ ಹಾಗರಗಿ ಅವರು ಮಲ್ಲಿಕಾರ್ಜುನ ಮರಗುತ್ತಿ, ಮಹಾನಗರ ಪಾಲಿಕೆಯ ನೈರ್ಮಲೀಕರಣ ಮೇಲ್ವಿಚಾರಕ ಬಂದೇನವಾಜ್, ಮಹಾಂತೇಶ, ಕಮಲಾಬಾಯಿ, ಅಂಬರೀಶ ಮತ್ತು ಸಂತೋಷ ಎಂಬುವವರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸುಳ್ಳು ದಾಖಲೆ, ಸುಳ್ಳು ಪಂಚರನ್ನು ಸೃಷ್ಟಿಸಿ ಜೀವಂತ ಇರುವ ಮಹಿಳೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆಯುವುದರ ಮೂಲಕ ಮೋಸ ಮಾಡಿರುವ ಮಲ್ಲಿಕಾರ್ಜುನ ಮರಗುತ್ತಿ, ಮಹಾನಗರ ಪಾಲಿಕೆ ಸ್ವಚ್ಛತಾ ಮೇಲ್ವಿಚಾರಕ ಬಂದೇನವಾಜ್, ಮಹಾಂತೇಶ, ಕಮಲಾಬಾಯಿ, ಅಂಬರೀಶ ಮತ್ತು ಸಂತೋಷ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅವರು ಒತ್ತಾಯಿಸಿದ್ದಾರೆ.
ಏನಿದು ಪ್ರಕರಣ ?
ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 55ರ ಸ್ವಚ್ಛತಾ ಮೇಲ್ವಿಚಾರಕ ಬಂದೇನವಾಜ್, ಮಲ್ಲಿಕಾರ್ಜುನ ಮರಗುತ್ತಿ, ಮಹಾಂತೇಶ, ಕಮಲಾಬಾಯಿ, ಅಂಬರೀಶ ಮತ್ತು ಸಂತೋಷ ಎಂಬುವವರು ಸೇರಿ ಸುಳ್ಳು ಮಾಹಿತಿ ಮತ್ತು ಸುಳ್ಳು ಪಂಚರನ್ನು ಸೃಷ್ಟಿಸಿ ಕಾವೇರಿ ಗಂಡ ಮಹಾಂತೇಶ ಎಂಬುವವರ ಹೆಸರಿನಲ್ಲಿ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಮಹಾನಗರ ಪಾಲಿಕೆ ವತಿಯಿಂದ ಕಾವೇರಿ ಗಂಡ ಮಹಾಂತೇಶ ಅವರ ಮರಣ ಪ್ರಮಾಣಪತ್ರಕ್ಕೆ 11.9.2018 ರಂದು ಅನುಮೋದನೆ ನೀಡಲಾಗಿದೆ. ಕಾವೇರಿ ಅವರ ಪತಿ ಬಿ.ಎಸ್.ಎಫ್.ನಲ್ಲಿ ಇರುವುದರಿಂದ ಇದರ ಒಂದು ಪ್ರತಿಯನ್ನು ಅವರಿಗೆ ಕಳುಹಿಸಲಾಗಿದೆ. ಇತ್ತೀಚೆಗೆ ಅಂದರೆ 15.12.2022 ರಂದು ಬಿ.ಎಸ್.ಎಫ್ ಮುಖ್ಯಸ್ಥರು ಮಹಾನಗರ ಪಾಲಿಕೆಗೆ ಪತ್ರ ಬರೆದು ಕಾವೇರಿ ಅವರ ಮರಣದ ಪ್ರಮಾಣಪತ್ರ ಕುರಿತು ನೈಜ ವರದಿ ಸಲ್ಲಿಸುವಂತೆ ಕೋರಿದ್ದಾರೆ. ಅಲ್ಲದೆ ಇದರ ಒಂದು ಪ್ರತಿಯನ್ನು ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಬೆಳಕೇರಾದಲ್ಲಿರುವ ಕಾವೇರಿ ಅವರಿಗೂ ಕಳುಹಿಸಿದ್ದಾರೆ. ಪತ್ರ ತಲುಪಿದ ನಂತರ ಕಾವೇರಿ ಅವರು ಖುದ್ದಾಗಿ ಮಹಾನಗರ ಪಾಲಿಕೆಗೆ ಹಾಜರಾಗಿ ತಾವು ಜೀವಂತ ಇರುವುದಾಗಿ ತಿಳಿಸಿದ್ದಾರೆ. ಕಾವೇರಿ ಅವರ ಹೇಳಿಕೆ ಆಧರಿಸಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರ ಆದೇಶದಂತೆ ಅಧಿಕಾರಿಗಳು ಮರು ಪಂಚನಾಮೆ ನಡೆಸಿದಾಗ ಸುಳ್ಳು ಮಾಹಿತಿ ಮತ್ತು ಸುಳ್ಳು ಪಂಚರನ್ನು ಸೃಷ್ಟಿಸಿ ಕಾವೇರಿ ಅವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದಿರುವುದು ಬೆಳಕಿಗೆ ಬಂದಿದೆ.