ಸುಳ್ಳು ಜಾತಿ ಪ್ರಮಾಣ : ನಗರಸಭೆ ಸದಸ್ಯ ರೇಣುಕಮ್ಮ ಬಂಧನ

ರಾಯಚೂರು.ಮಾ.೨೩- ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ವಾರ್ಡ್ ೩೧ ರ ನಗರಸಭೆ ಸದಸ್ಯರಾದ ರೇಣುಕಮ್ಮ ಭೀಮರಾಯ ಅವರನ್ನು ಗುಲ್ಬರ್ಗಾ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಸದಾರ್ ಬಜಾರ್ ಠಾಣೆಗೆ ರೇಣುಕಮ್ಮ ಭೀಮರಾಯ ಅವರನ್ನು ಕರೆತರಲಾಗಿತ್ತು. ಈ ಬಂಧನದ ವಿಷಯ ತಿಳಿಯುತ್ತಿದ್ದಂತೆ ಠಾಣೆಗೆ ಧಾವಿಸಿದ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಮತ್ತು ಕೆಲ ಸದಸ್ಯರು ರೇಣುಕಮ್ಮ ಭೀಮರಾಯ ಅವರ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಮಾಹಿತಿಯನ್ನು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ತಿಳಿಸಲಾಯಿತು. ಈ ಬಗ್ಗೆ ದಾಖಲೆಗಳನ್ನು ಕೇಳಿದ ಅಧಿಕಾರಿಗಳೊಂದಿಗೆ ವಿನಯಕುಮಾರ ಅವರು ಚರ್ಚಿಸಿದರು. ವಾರ್ಡ್ ೩೧ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ರೇಣುಕಮ್ಮ ಅವರು ಕಿಳ್ಳೆಕ್ಯಾತಿ ಜನಾಂಗಕ್ಕೆ ಸೇರಿದ್ದು, ಶಿಳ್ಳೆಕ್ಯಾತಿ ಎಂದು ಜಾತಿ ಪ್ರಮಾಣ ಪತ್ರ ಪಡೆದು ಸ್ಪರ್ಧಿಸಿ, ಜಯಗಳಿಸಿದ್ದರು.
ಈ ಕುರಿತು ಛಲುವಾದಿ ಮಹಾಸಭಾ ಅಧ್ಯಕ್ಷರಾದ ರವೀಂದ್ರನಾಥ ಪಟ್ಟಿ ಅವರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆಧಾರವಾಗಿ ಜಿಲ್ಲಾಡಳಿತ ಅವರ ಸುಳ್ಳು ಜಾತಿ ಪ್ರಮಾಣ ಪತ್ರ ಹಿಂಪಡೆದಿತ್ತು. ನಂತರ ಪ್ರಾದೇಶಿಕ ಆಯುಕ್ತರು ರೇಣುಕಮ್ಮ ಭೀಮರಾಯ ಅವರ ಸದಸ್ಯತ್ವ ರದ್ದುಗೊಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಆದರೆ, ಮತ್ತೊಂದು ಕಡೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಈ ಕುರಿತು ಸದಾರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿತು. ಈ ಪ್ರಕರಣಕ್ಕೆ ಸಂಬಂಧಿಸಿ ಇಂದು ರೇಣುಕಮ್ಮ ಭೀಮರಾಯ ಅವರನ್ನು ಬಂಧಿಸಲಾಯಿತು.
ಮಧ್ಯಾಹ್ನ ಸದಾರ್ ಬಜಾರ್ ಠಾಣೆಯಲ್ಲಿ ರೇಣುಕಮ್ಮ ಭೀಮರಾಯ ಅವರನ್ನು ಕರೆತರಲಾಗಿತ್ತು. ಅವರನ್ನು ಗುಲ್ಬರ್ಗಾಕ್ಕೆ ಕರೆದೊಯ್ಯುವ ಪ್ರಕ್ರಿಯೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಅಧಿಕಾರಿಗಳೊಂದಿಗೆ ಈ.ವಿನಯಕುಮಾರ ಅವರು ಸುಧೀರ್ಘ ಚರ್ಚೆ ನಡೆಸಿದರು. ಪತ್ರಿಕೆ ಮುದ್ರಣಕ್ಕೆ ಹೋಗುವವರೆಗೂ ಮುಂದುವರೆದಿತ್ತು. ಈ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ರೇಣುಕಮ್ಮ ಭೀಮರಾಯ ಅವರ ಸುಳ್ಳು ಜಾತಿ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಗುರಿಯಾದಂತಹ ಘಟನೆ ನಡೆದಿದೆ.