
ಬೆಂಗಳೂರು, ನ. ೧೯- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು. ಸುಳ್ಳೇ ಅವರ ಮನೆ ದೇವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿರವರ ಜಯಂತಿ ಕಾರ್ಯಕ್ರಮ ಹಾಗೂ ಬೆಂಗಳೂರು ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರುಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸೂಯೆ, ದ್ವೇಷ, ಹೊಟ್ಟೆಉರಿಯಿಂದ ಸುಳ್ಳು ಆರೋಪ ಹಾಗೂ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಅವರದು ಯಾವಾಗಲೂ ಹಿಟ್ ಅಂಡ್ ರನ್ ಕೇಸ್. ಯಾವುದೇ ಆರೋಪಗಳನ್ನು ಇದುವರೆಗೂ ಸಾಬೀತುಪಡಿಸಿಲ್ಲ ಎಂದರು.
ಹೇಗಾದರೂ ಮಾಡಿ ನಮಗೆ ಬಸಿ ಬಳಿಯಬೇಕು ಎಂದು ಬಿಜೆಪಿ ಹಾಗೂ ಜನತಾ ದಳ ಇವರುಗಳು ಅಪಪ್ರಚಾರ ನಡೆಸಿದ್ದಾರೆ. ಜೆಡಿಎಸ್ ಜಾತ್ಯಾತೀತತೆ ಬಿಟ್ಟಿದೆ. ಹಾಗಾಗಿ ಜೆಡಿಎಸ್‌ನ್ನು ನಾನು ಜನತಾದಳ ಎಂದಷ್ಟೇ ಕರೆಯುತ್ತೇನೆ ಎಂದರು.ಅನ್ನ ಅಳಿಸಿತ್ತು ನಾಯಿ ಕಾದಿತ್ತು ಎಂಬಂತೆ ಇವರುಗಳು ಎನ್‌ಡಿಎಗೆ ಸೇರ್ಪಡೆಯಾದ ನಂತರ ನಮ್ಮ ಮೇಲೆ ಬೀದಿಯಲ್ಲಿ ಅಪಪ್ರಚಾರ ಹೆಚ್ಚು ಮಾಡಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ಏನೆಲ್ಲಾ ಮಾಡಿದರೋ ಅದನ್ನೆಲ್ಲಾ ನಾವು ಮಾಡುತ್ತಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ವರ್ಗಾವಣೆಯಲ್ಲಿ ಹಣ ಮಾಡಿದ ಗಿರಾಕಿಗಳು ಇವರು ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.ಅಧಿಕಾರದಲ್ಲಿದ್ದಾಗ ಅಧಿಕಾರ ಮಾಡದ ಕುಮಾರಸ್ವಾಮಿ ಈಗ ಅಧಿಕಾರ ಹೋದ ಮೇಲೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಅಧಿಕಾರ ನಡೆಸಲಿ ಎಂದು ನಾವು ಬೆಂಬಲ ನೀಡಿದ್ದೆವು. ಆದರೂ ಅವರು ಅಧಿಕಾರ ಮಾಡಲು ಆಗಲಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.
ಆಡಳಿತ ಸುಧಾರಣೆ ದೃಷ್ಠಿಯಿಂದ ವರ್ಗಾವಣೆ ಪ್ರಕ್ರಿಯೆ ಮಾಡುವುದು ಸಹಜ. ಹಿಂದೆ ಇವರೆಲ್ಲಾ ವರ್ಗಾವಣೆ ಮಾಡಿಲ್ಲವೇ, ಎಲ್ಲಾ ಕಾಲದಲ್ಲೂ ವರ್ಗಾವಣೆಗಳಾಗಿವೆ. ನಾವಂತೂ ವರ್ಗಾವಣೆಗೆ ಒಂದು ಪೈಸೆ ತೆಗೆದುಕೊಂಡಿಲ್ಲ. ತೆಗೆದುಕೊಂಡಿರುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಕ್ಷುಲ್ಲಕ ವ್ಯಕ್ತಿ
ವಿದ್ಯುತ್ ಕಳ್ಳತನ ಮಾಡಿ ದಂಡ ಕಟ್ಟಿ ಅಪರಾಧ ಎಸಗಿರುವ ಕುಮಾರಸ್ವಾಮಿ ಕ್ಷುಲ್ಲಕ ಅಪರಾಧ ಎಂದು ಹೇಳಿದ್ದಾರೆ. ಕುಮಾರಸ್ವಾಮಿಯೇ ಕ್ಷುಲ್ಲಕ ವ್ಯಕ್ತಿ. ಅವರ ಮಾತುಗಳಿಗೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ಅವರು ಹೇಳಿದರು.
ವಿರೋಧ ಪಕ್ಷಗಳ ಅಪಪ್ರಚಾರಗಳಿಗೆ ತಲೆಕೆಡಿಸಿಕೊಳ್ಳದೇ ನಾವು ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ನುಡಿದಂತೆ ನಡೆದಿದ್ದೇವೆ. ಮುಂದೆಯೂ ಅದೇ ರೀತಿ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇಂದಿರಾಗಾಂಧಿ ಗುಣಗಾನ
ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿರವರು ದೇಶದ ಉಕ್ಕಿನ ಮಹಿಳೆ. ಜನಪರ, ಬಡವರ ಪರ ದೃಢ ನಿರ್ಧಾರಗಳನ್ನು ಕೈಗೊಂಡಿದ್ದರು. ರಾಜಕೀಯವನ್ನು ಸಮಾಜ ಸೇವೆ ಎಂಬಂತೆ ಭಾವಿಸಿದ್ದರು ಎಂದರು.ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದ ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ. ಬಿಜೆಪಿಯ ಯಾವ ನಾಯಕರು ತ್ಯಾಗ ಬಲಿದಾನ ಮಾಡಿಲ್ಲ ಎಂದರು.ದೇಶದಲ್ಲಿ ಜಾತ್ಯಾತೀತ ತತ್ವ, ಸಾಮಾಜಿಕ ನ್ಯಾಯ, ಬಡವರ ಪರ ಕಾಳಜಿ, ಸಮ ಸಮಾಜ ನಿರ್ಮಾಣ, ಇದಕ್ಕೆ ಸ್ಪಂದಿಸಿ ಕಾಂಗ್ರೆಸ್ ಪಕ್ಷ ಜನರ ಸಮಸ್ಯೆಗಳನ್ನು ಬಗೆಹರಿಸಿ ದೇಶ ಕಟ್ಟುವ ಕೆಲಸ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾಗಿ ಓ. ಮಂಜುನಾಥ್, ಉತ್ತರ ಜಿಲ್ಲಾಧ್ಯಕ್ಷರಾಗಿ ಅಬ್ದುಲ್ ವಾಜೀದ್, ಕೇಂದ್ರ ಜಿಲ್ಲಾಧ್ಯಕ್ಷರಾಗಿ ಜಿ.ಸಿ. ಗೌತಮ್, ದಕ್ಷಿಣ ಜಿಲ್ಲಾಧ್ಯಕ್ಷರಾಗಿ ಹನುಮಂತರಾಯಪ್ಪ ಅಧಿಕಾರ ಸ್ವೀಕರಿಸಿದರು. ಇವರುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಕೋರಿ ಮುಂದಿನ ನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವ ಬೈರತಿ ಸುರೇಶ್, ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.