ಸುಳ್ಳನ್ನು ಹೆಚ್ಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ

ಸಂಜೆವಾಣಿ ನ್ಯೂಸ್
ಮೈಸೂರು:ಏ.14:- ಸುಳ್ಳು ಹೇಳಿದರೆ ಜನ ಮೋದಿ ಮೋದಿ ಅಂತಾರೆ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರು ಸುಳ್ಳು ಹೇಳೋದನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ನಗರದ ವಿದ್ಯಾರಣ್ಯಪುರಂನ ಬಳಿಯ ಭೂತಾಳೆ ಮೈದಾನದಲ್ಲಿ ನಡೆದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜನಧ್ವನಿ-2 ಯಾತ್ರೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ, ವಿದೇಶದಿಂದ ಕಪ್ಪು ಹಣ, ರೈತರ ಆದಾಯ ದುಪ್ಪಟ್ಟು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದಿದ್ದರು, ಆದರೆ, ಅವು ಆಗಿದೀಯಾ ಎಂದು ಹೇಳಿದರು.
ಡೀಸೆಲ್- ಪೆಟ್ರೋಲ್-ಗ್ಯಾಸ್-ರಸಗೊಬ್ಬರದ ಬೆಲೆ ಕಡಿಮೆ ಮಾಡುತ್ತೇವೆ ಅಂದಿದ್ದರು. ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸ್ತೀವಿ ಅಂದರು. ಹೀಗೆ ರಾಶಿ ರಾಶಿ ಸುಳ್ಳುಗಳ ಮೂಲಕವೇ ಭಾರತೀಯರನ್ನು ನಿರಂತರವಾಗಿ ಬಕ್ರಾ ಮಾಡಿ ವಂಚಿಸಿದರು. ಹತ್ತು ವರ್ಷಗಳ ಕಾಲ ದೇಶದ ಜನರನ್ನು ವಂಚಿಸಿದವರಿಗೇ ಮತ ಹಾಕೋಕೆ ನಿಮಗೆ ಮನಸ್ಸುಬರತ್ತಾ ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಮಾಡಿದವರು ಯಾರು, ಮಹಿಳಾ-ಮಕ್ಕಳ ಆಸ್ಪತ್ರೆ ಮಾಡಿದವರು ಯಾರು, ಶಾಲೆ-ಹಾಸ್ಟೆಲ್ ಗಳನ್ನು ಮಾಡಿದವರು ಯಾರು, ಮೈಸೂರಿನ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಕೊಟ್ಟ ಸರ್ಕಾರ ಯಾವುದು ಎನ್ನುವುದು ಮೈಸೂರಿನ ಪ್ರತಿ ಪ್ರಜ್ಞಾವಂತರಿಗೂ ಗೊತ್ತು. ನಾವು ಮಾಡಿದಷ್ಟು ಕೆಲಸವನ್ನು ಮಾಡಲು ಬಿಜೆಪಿಗೂ ಅವಕಾಶ ಇತ್ತು. ಜನ ಅವಕಾಶ ಕೊಟ್ಟಿದ್ದರು. ಆದರೆ ಈ ಅವಕಾಶ ಸಿಕ್ಕಾಗ ಬಿಜೆಪಿ ಸಂಸದರು ಕೆಲಸ ಮಾಡಲಿಲ್ಲ. ಹೀಗಾಗಿ ನುಡಿದಂತೆ ನಡೆದು ಅಭಿವೃದ್ಧಿಯ ದಿಕ್ಕಲ್ಲಿ ಮುನ್ನುಗ್ಗುತ್ತಿರುವ ನಮಗೆ ಅವಕಾಶ ಕೊಡಿ. ಸಾಮಾನ್ಯ ಕಾರ್ಯಕರ್ತರಾಗಿ ಹೋರಾಟ, ಪ್ರತಿಭಟನೆಗಳಿಂದ ಬೆಳೆದ ಎಂ.ಲಕ್ಷ್ಮಣ್ ಅವರನ್ನು ಈ ಬಾರಿ ಗೆಲ್ಲಿಸಿ ಎಂದು ಕರೆ ನೀಡಿದರು.
ಬಿಜೆಪಿಗೆ ಮೈಸೂರು-ಕೊಡಗಿನ ಜನತೆ ಅವಕಾಶ ಕೊಟ್ಟಾಗ ಬಿಜೆಪಿ ಸಂಸದರು, ಶಾಸಕರು, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲಿಲ್ಲ. ಈಗ ಕೇವಲ ಅಭ್ಯರ್ಥಿಯನ್ನು ಬದಲಾಯಿಸಿ ಮತ ಕೇಳುತ್ತಿದ್ದಾರೆ. ಇದು ಹೊಣೆಗೇಡಿತನ ಅಲ್ಲವೇ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಬಡವರು, ದುಡಿಯವ ವರ್ಗಗಳ ಪರವಾಗಿ, ಮಹಿಳೆಯರ ಪರವಾಗಿ ಮಾಡಿದ ಒಂದೇ ಒಂದು ಕೆಲಸ ಯಾರಿಗಾದರೂ ಗೊತ್ತಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಕೇವಲ ಸುಳ್ಳುಗಳನ್ನು ಸೃಷ್ಟಿಸಿ, ಭಾವನಾತ್ಮಕವಾಗಿ ಕೆರಳಿಸದವರಿಗೆ ಮತ ಹಾಕಿದರೆ ನೀವು ಮೋಸಹೋದಂತೆ ತಾನೇ ಎಂದು ಪ್ರಶ್ನಿಸಿದರು.
ಸೋಲುವ ಮನ್ಸೂಚನೆಯಿಂದ ಪ್ರತಾಪ ಸಿಂಹಗೆ ಟಿಕೆಟ್ ಕೊಡಲಿಲ್ಲ: ಸಂಸದ ಪ್ರತಾಪ ಸಿಂಹ ಕಳೆದ ಹತ್ತು ವರ್ಷದಲ್ಲಿ ಕ್ಷೇತ್ರಕ್ಕೆ ಸರಿಯಾಗಿ ಕೆಲಸ ಮಾಡಿಲ್ಲ. ಪ್ರತಾಪ ಸಿಂಹ ಕೊಡುಗೆ ಶೂನ್ಯವೆಂದರೆ ಅತಿಶಯೋಕ್ತಿ ಆಗದು. ರಾಜ್ಯದ ಅನ್ಯಾಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಲಿಲ್ಲ. ಆತ ಕೆಲಸ ಮಾಡಿದ್ದರೆ ಯಾಕೇ ಅಭ್ಯರ್ಥಿಯನ್ನಾಗಿ ಮಾಡಲಿಲ್ಲ. ಲೋಕಸಭೆಯಲ್ಲಿ ಸೋಲುವ ಮುನ್ಸೂಚನೆಯಿಂದ ಪ್ರತಾಪ ಸಿಂಹ ಅವರನ್ನು ಬದಲಾವಣೆ ಮತ್ತೊಬ್ಬರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ ತಂಟೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಧರ್ಮ ಆಧಾರಿತ ದೇಶವನ್ನು ಕಟ್ಟುವುದಾಗಿ ಹೇಳುತ್ತಿದ್ದಾರೆ. ಹಿಂದೂ ದೇಶ ಕಟ್ಟುತ್ತೇವೆ ಎನ್ನುತ್ತಾರೆ, ಇದು ಸಂವಿಧಾನ ವಿರೋಧಿಯಲ್ಲವೇ ಎಂದು ಪ್ರಶ್ನಿಸಿದರು.
ಬರ ಪರಿಹಾರ ನೀಡದೆ ರಾಜ್ಯ ಸರ್ಕಾರಕ್ಕೆ ಅನ್ಯಾಯವೆಸಗಿರುವುದು ಸಂವಿಧಾನ ವಿರೋಧಿಯಲ್ಲವೆ? ಹಿಂದಿ ಭಾಷೆಯನ್ನು ದಕ್ಷಿಣ ರಾಜ್ಯಗಳ ಮೇಲೆ ಸಂವಿಧಾನ ವಿರೋಧಿಯಲ್ಲವೆ? ಬಿಜೆಪಿ ಅವರಿಗೆ ಸಂವಿಧಾನದ ನಂಬಿಕೆ ಇಲ್ಲ. ಮನುಸತಿ ಮತ್ತೆ ತರಬೇಕು ಎಂಬುದು ಅವರ ಅಜೆಂಡಾ. ಇದನ್ನು ಜನತೆ ಅರಿಯಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಮಾಜಿ ಸಚಿವ ವಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮಯ್ಯ, ಮಾಜಿ ಶಾಸಕ ಎಸ್.ಟಿ.ಸೋಮಶೇಖರ್, ಕೆಪಿಸಿಸಿ ಮಹಿಳಾ ಅಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್, ಮುಡಾ ಅಧ್ಯಕ್ಷ ಕೆ.ಮರೀಗೌಡ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಎಚ್.ಎ.ವೆಂಕಟೇಶ್ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.