ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಾರಂಭ

ಸುಳ್ಯ, ಜ.೩- ಶ್ರೀ ಚೆನ್ನಕೇಶವ ದೇವರ ವರ್ಷಾವಧಿ ಜಾತ್ರೋತ್ಸವವು ಪ್ರಾರಂಭಗೊಂಡಿದ್ದು ಜ.೧೨ ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ದಾಮೋದರ ತಂತ್ರಿಗಳವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಈ ಸಂದರ್ಭದಲ್ಲಿದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸದಸ್ಯರಾದ ಲಿಂಗಪ್ಪ ಗೌಡ ಕೇರ್ಪಳ,  ಎಂ.ಮೀನಾಕ್ಷಿ ಗೌಡ, ಎ.ರಮೇಶ ಬೈಪಡಿತ್ತಾಯ, ಎನ್.ಜಯಪ್ರಕಾಶ್ ರೈ ಹಾಗೂ ಕೃಪಾಶಂಕರ ತುದಿಯಡ್ಕ, ವೀರಕೇಸರಿ ಕರಣಿಕರು, ಗಿರಿಜಾಶಂಕರ ತುದಿಯಡ್ಕ, ಕಮಲಾಕ್ಷಿ ಟೀಚರ್, ರಾಧಾಕೃಷ್ಣ ಬೂಡು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಜ.೦೫ ರಂದು ಬೆಳಿಗ್ಗೆ ಪನ್ನೆಬೀಡು ಭಗವತಿ ಸ್ಥಾನದಲ್ಲಿ ಪ್ರತಿಷ್ಠಾ ದಿನ ಮಹಾಪೂಜೆ ನಡೆಯಲಿದೆ. ಜ.೦೭ ರಂದು ರಾತ್ರಿ ಉತ್ಸವ ಬಲಿ ಹೊರಡುವುದು. ಜ.೦೮ ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ, ನಡುಬೆಳಗು,ಬಟ್ಟಲು ಕಾಣಿಕೆ ನಡೆಯಲಿದೆ. ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ, ವಿವೇಕಾನಂದ ವೃತ್ತ ಹಳೆಗೇಟು,ಹೊಸಗದ್ದೆ ಹಳೆಗೇಟು ಕಟ್ಟೆ, ಅಮೃತಭವನ,ರಾಮಮಂದಿರ,ಜಟ್ಟಿಪಳ್ಳ ಕಟ್ಟೆಗಳಲ್ಲಿ ಕಟ್ಟೆ ಪೂಜೆಗಳು ನಡೆಯಲಿದೆ.

ಜ.೦೯ ರಂದು ಬೆಳಿಗ್ಗೆ ಅಜ್ಜಾವರ ಶ್ರೀ ಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಲಿದೆ.ರಾತ್ರಿ ಮಿತ್ತೂರು ದೈವಗಳ ಭಂಡಾರ ಬರುವುದು, ಕಾನತ್ತಿಲ ದೈವಗಳ ಭಂಡಾರ ಬರುವುದು ನಂತರ ವಾಲಸಿರಿ ಉತ್ಸವ ನಡೆಯಲಿದೆ.

ಜ.೧೦ ರಂದು ಬೆಳಿಗ್ಗೆ ದೊಡ್ಡದರ್ಶನ ಬಲಿ,ಬಟ್ಟಲು ಕಾಣಿಕೆ ನಡೆಯಲಿದೆ. ರಾತ್ರಿ ಕಲ್ಕುಡ ದೈವಗಳ ಭಂಡಾರ ಬರುವುದು ನಂತರ ರಥೋತ್ಸವ ನಡೆಯಲಿದೆ.ಜ.೧೧ ರಂದು ಬೆಳಿಗ್ಗೆ ಆರಾಟ ಬಾಗಿಲು ತೆಗೆಯುವುದು, ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಭಾರಾಧ್ವಾಜಾಶ್ರಮ ಅರಂಬೂರು ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಲಿದೆ.

ರಾತ್ರಿ ಬಜಪ್ಪಿಲ ದೈವಗಳ ಭಂಡಾರ ಬರುವುದು,ಉತ್ಸವ ಬಲಿ ಹೊರಟು ಪಟ್ಟಣ ಸವಾರಿ, ಆರಕ್ಷಕ ಠಾಣಾ ಕಟ್ಟೆಯಿಂದ ಗಾಂಧಿನಗರ ,ಅರಣ್ಯ ಇಲಾಖೆ,ಕೇರ್ಪಳ,ತಾಲೂಕು ಕಚೇರಿ,ಪಯಸ್ವಿನಿ ನದಿ ಬಳಿ ಕಟ್ಟೆಪೂಜೆಗಳು ನಡೆಯಲಿದೆ. ನಂತರ ಅವಭೃತ ಸ್ನಾನವಾಗಿ ಬಂದು ದರ್ಶನ ಬಲಿ ಬಟ್ಟಲು ಕಾಣಿಕೆ,ಧ್ವಜಾವರೋಹಣ ನಡೆಯಲಿದೆ. ಜ.೧೨ ರಂದು ಮಧ್ಯಾಹ್ನ ಸಂಪ್ರೋಕ್ಷಣೆ,ಮಂತ್ರಾಕ್ಷತೆ ನಡೆಯಲಿದೆ.