ಸುಳ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ನ.೭ ರವರೆಗೆ ಕಾಯುವಂತೆ ಅತೃಪ್ತ ಗುಂಪಿಗೆ ನಳಿನ್ ಸೂಚನೆ
ಸುಳ್ಯ ಮಂಡಲ ಬಿಜೆಪಿಯಲ್ಲಿ ಭಿನ್ನಮತ ಮತ್ತು ಗುಂಪುಗಾರಿಕೆ ತೀವ್ರಗೊಂಡಿದ್ದು ಸಮಾವೇಶ ನಡೆಸಿ ಶಕ್ತಿಪ್ರದರ್ಶನಕ್ಕೆ ಅತೃಪ್ತರ ಗುಂಪು ನಿರ್ಧರಿಸಿದೆ. ಜಿಲ್ಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು ನ.೭ರವರೆಗೆ ಯಾವುದೇ ಚಟುವಟಿಕೆ ನಡೆಸದಂತೆ ಮತ್ತು ಆ ಬಳಿಕ ಚರ್ಚೆಗೆ ಕರೆಯುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅತೃಪ್ತ ಗುಂಪಿಗೆ ಸೂಚನೆ ನೀಡಿದ್ದಾರೆ.
ಸುಳ್ಯ ಬಿಜೆಪಿಯಲ್ಲಿ ಸ್ಪಷ್ಟವಾಗಿ ಎರಡು ಬಣ ಉಂಟಾಗಿದ್ದು ಪಕ್ಷದ ಚಟುವಟಿಕೆಗಳಿಗೆ ತಮ್ಮನ್ನು ಕರೆಯದೆ ತಮ್ಮನ್ನು ಕಡೆಗಣಿಸುತ್ತಿರುವುದಾಗಿ ಎಸ್. ಎನ್.ಮನ್ಮಥ, ಎನ್.ಎ.ರಾಮಚಂದ್ರ
ಮತ್ತಿತರ ನೇತೃತ್ವದಲ್ಲಿ ಬಿಜೆಪಿಯ ೨೫ಕ್ಕೂ ಹೆಚ್ಚು ಮಂದಿ ಹಿರಿಯ ನಾಯಕರು ಸಭೆ ನಡೆಸಿ
ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಅವರಿಗೆ ದೂರು ನೀಡಿದ್ದರು. ಬಳಿಕ ಇವರನ್ನು ಕರೆಸಿ ಜಿಲ್ಲಾಧ್ಯಕ್ಷರು ಚರ್ಚೆ ನಡೆಸಿದ್ದರು. ಆದರೆ ಭೇಟಿ ಫಲಪ್ರದವಾಗದ ಹಿನ್ನಲೆಯಲ್ಲಿ ಅತೃಪ್ತರು ಸುದ್ದಿಗೋಷ್ಠಿ ನಡೆಸಿ ಅಸಮಾಧಾನವನ್ನು ಸಾರ್ವಜನಿಕವಾಗಿ ತೋರ್ಪಡಿಸಲು ಮತ್ತು ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ನಡೆಸಲು ನಿರ್ಧರಿಸಿದ್ದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಾಧ್ಯಕ್ಷ
ನಳಿನ್ ಕುಮಾರ್ ಕಟೀಲ್ ನ.೭ರ ಬಳಿಕ ಇವರ ಜೊತೆ ಚರ್ಚೆ ನಡೆಸಿ ಸಮಸ್ಯೆ
ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.