ಸುಳ್ಯ ನಗರ ಪಂಚಾಯಿತಿ ಸಾಮಾನ್ಯ ಸಭೆ: ಅಧ್ಯಕ್ಷ-ಮುಖ್ಯಾಧಿಕಾರಿ ನಡುವೆ ಸಭೆಯಲ್ಲಿ ವಾಗ್ವಾದ

ಸುಳ್ಯ, ಎ.೨೩- ನಗರ ಪಂಚಾಯಿತಿ ಆಡಳಿತವನ್ನು ಮುನ್ನಡೆಸುವ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಯ ಮಧ್ಯೆ ಭಿನ್ನಾಭಿಪ್ರಾಯ ಸ್ಪೋಟಗೊಂಡು ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ನಗರ ಪಂಚಾಯಿತಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರ ನಡುವೆ ವಾಗ್ವಾದಕ್ಕೆ ವೇದಿಕೆಯಾಯಿತು. ಸಭೆಯ ಆರಂಭದಲ್ಲಿ ಮಾತನಾಡಿದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನಾನು ಸಿಬ್ಬಂದಿಗಳ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಾಧಿಕಾರಿ ಸಹಕಾರ ನೀಡುತ್ತಿಲ್ಲ, ನಾವು ಹೇಳಿದ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಅಧ್ಯಕ್ಷರು ತಮ್ಮ ಕೆಲಸ ಮಾಡದೆ ಕೆಲವು ಸಿಬ್ಬಂದಿಗಳ ಮಾತು ಕೇಳಿ ನಮ್ಮ ಮೇಲೆ ಸವಾರಿ ಮಾಡುತ್ತಾರೆ ನಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದರು. ನಗರ ಪಂಚಾಯಿತಿ

ಎದುರಿನಲ್ಲಿ ತುಂಬಿರುವ ಕಸವನ್ನು ತೆರವು ಮಾಡಲು, ಮೀನು ಮಾರುಕಟ್ಟೆಯ ನಷ್ಟವನ್ನು ತಪ್ಪಿಸಲು ಪ್ರಯತ್ನಿಸದೆ ಅಧಿಕಾರಿಗಳ ಮೇಲೆ ಸವಾರಿ ಮಾಡುತ್ತಾರೆ ಎಂದು ಆರೋಪಿಸಿದರು. ಹೀಗೆ ಅಧ್ಯಕ್ಷರ ಮತ್ತು ಮುಖ್ಯಾಧಿಕಾರಿಯ ಮಧ್ಯೆ ಹಲವು ಹೊತ್ತು ಮಾತಿನ ಚಕಮಕಿ ಮುಂದುವರಿಯಿತು. ಅಧ್ಯಕ್ಷ-ಮುಖ್ಯಾಧಿಕಾರಿ ಮಧ್ಯೆಯ ವಾಗ್ವಾದ ನೋಡಿ ಬೇಸತ್ತ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಕೆ.ಎಸ್.ಉಮ್ಮರ್ ಮಾತನಾಡಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಜಗಳ ಮಾಡುತ್ತಾ ಕೂತರೆ ನಾವು ಸಭೆಯಿಂದ ಹೊರ ಹೋಗುತ್ತೇವೆ ಎಂದರು. ಜನರ ಸಮಸ್ಯೆಯ ಬಗ್ಗೆ ಚರ್ಚೆ ಮಾಡಬೇಕಾದ ಸಭೆಯಲ್ಲಿ ಅಡಳಿತ ಮಾಡುವವರೇ ಜಗಳ ಮಾಡುತ್ತಾ ಕುಳಿತರೆ ಹೇಗೆ ಎಂದು ಪ್ರಶ್ನಿಸಿದರು.ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಾದ ಸಭೆಯಲ್ಲಿ ಅಧ್ಯಕ್ಷ ಅಧಿಕಾರಿಗಳೇ ಜಗಳ ಮಾಡುವುದು ಅಕ್ಷಮ್ಯ ಎಂದು ಹೇಳಿದರು. ಸದಸ್ಯ ಎಂ.ವೆಂಕಪ್ಪ ಗೌಡ ಮಧ್ಯೆ ಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದರು.

ಆಡಳಿತ ಅಧಿಕಾರಿಗಳ ಮಧ್ಯೆಯ ಭಿನ್ನಾಭಿಪ್ರಾಯಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿಗಳ ಜೊತೆ ಹೊಂದಾಣಿಕೆ ಇಲ್ಲದಿದ್ದರೆ ಆಡಳಿತ ಪಕ್ಷಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಅಧಿಕಾರ ವಹಿಸಿ ಆರು ತಿಂಗಳಾದರೂ ಯಾವುದೇ ಅಭಿವೃದ್ಧಿ ಕೆಲಸ ನಗರ ಪಂಚಾಯತ್ ನಿಂದ ಆಗುತ್ತಿಲ್ಲ ಎಂದು ಜನರು ಭರವಸೆ ಕಳೆದುಕೊಂಡಿದ್ದಾರೆ ಎಂದು ವಿಪಕ್ಷ ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ ಹೇಳಿದರು.

ರಾಜ್ಯದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಸುಳ್ಯದಲ್ಲಿ ಪ್ರಕರಣಗಳು ಯಾವ ಹಂತದಲ್ಲಿದೆ ಎಂಬ ಬಗ್ಗೆ ಆರೋಗ್ಯ ಇಲಾಖೆ ನ.ಪಂ.ಗೆ ಮಾಹಿತಿ ನೀಡುತ್ತಿಲ್ಲ. ಕಂದಾಯ ಇಲಾಖೆಯವರು ಮತ್ತು ಪೊಲೀಸರು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಇಲ್ಲ ವಿಪಕ್ಷ ಸದಸ್ಯ ಎಂ. ವೆಂಕಪ್ಪ ಗೌಡರು ಹೇಳಿದರು. ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ. ಟಿವಿ ನೋಡುವಾಗ ನಡುಕ ಶುರುವಾಗುತ್ತದೆ. ಆದರೆ ಸುಳ್ಯದಲ್ಲಿ ಕೊರೋನಾ ಇದೆಯೋ, ಇಲ್ಲವೋ ಎಂಬ ಬಗ್ಗೆ ನಮಗೆ ಮಾಹಿತಿ ಸಿಗುತ್ತಿಲ್ಲ. ಮಾಹಿತಿ ನೀಡಬೇಕಾದ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯವರು ಸುಮ್ಮನೆ ಕುಳಿತಂತೆ ಕಾಣುತ್ತಿದೆ. ಸಭೆಗೆ ಬರುವಂತೆ ಹೇಳಿದರೂ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿ ಮಾತನಾಡಿ, ಪೊಲೀಸ್ ಅಧಿಕಾರಿಯವರಿಗೆ ಸಭೆಗೆ ಬರಲು ತಿಳಿಸಿದ್ದೇನೆ. ತಹಶೀಲ್ದಾರರು ಮಂಗಳೂರಿನಲ್ಲಿ ಇಂದು ಸಭೆ ಇದೆ ಎಂದು ಹೇಳಿದ್ದಾರೆ ಎಂದು ಹೇಳಿದರು. ಆಗ ಮಾತನಾಡಿದ ವೆಂಕಪ್ಪ ಗೌಡರು, ಮಾಹಿತಿ ನೀಡಬೇಕಾದ ಅಧಿಕಾರಿಗಳು ಸಭೆಗೆ ಬರುವುದಿಲ್ಲವೆಂದಾದರೆ ಕೊರೋನಾದ ಗಂಭೀರತೆಯ ಬಗ್ಗೆ ಅವರು ನಿರ್ಲಕ್ಷ್ಯ ವಹಿಸಿದಂತಾಗುತ್ತದೆ. ಎಂದು ಹೇಳಿದರು. ಈ ವಿಚಾರದಲ್ಲಿ ಕೆಲ ಹೊತ್ತು ಚರ್ಚೆ ನಡೆದು ಬಳಿಕ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ಬರೆಯಲು ಸದಸ್ಯರು ಒತ್ತಾಯಿಸಿzರು.

ಸಭೆಯಲ್ಲಿ ನ.ಪಂ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ದನಾಯ್ಕ್, ಮುಖ್ಯಾಧಿಕಾರಿ ಎಂ.ಆರ್.ಸ್ವಾಮೀ, ನ.ಪಂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.