ಸುಳ್ಯ ನಗರ ಪಂಚಾಯತ್ ಬಜೆಟ್ ಮಂಡನೆ

ಸುಳ್ಯ, ಮಾ.೨೭- ಸುಳ್ಯ ನಗರ ಪಂಚಾಯತ್‌ನ ೨೦೨೧-೨೨ ನೇ ಸಾಲಿನ ಮುಂಗಡ ಆಯವ್ಯಯ ಮಂಡನಾ ಸಭೆ ಸುಳ್ಯ ನ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಅಧ್ಯಕ್ಷ ವಿನಯಕುಮಾರ್ ಕಂದಡ್ಕ ೨೦೨೧-೨೨ರ ಆಯ ವ್ಯಯ ಪತ್ರ ಮಂಡಿಸಿದರು. ರೂ.೯.೯೧ಕೋಟಿ ಆದಾಯ ನಿರೀಕ್ಷಿಸಲಾಗಿದ್ದು,ರೂ. ೧೧.೧೬ ಕೋ ವೆಚ್ಚ ಅಂದಾಜಿಸಲಾಗಿದೆ. ಕಳೆದ ಸಾಲಿನ ಉಳಿಕೆ ೩.೨೧ಕೋಟಿ ಇದೆಯೆಂದು ಅವರು ತಿಳಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿ ಸದಸ್ಯ ಎಂ. ವೆಂಕಪ್ಪ ಗೌಡ ಒಂದೊಂದು ವಾರ್ಡಿಗೆ ಅಭಿವೃದ್ಧಿ ಕೆಲಸಗಳಿಗೆ ಇರಿಸಿದ ಹಣ ತೀರಾ ಕಡಿಮೆಯಾಗಿದ್ದು, ಈಗ ಪ್ರತಿ ವಾರ್ಡಿಗೆ ಮೂರು ಲಕ್ಷ ನೀಡಲಾಗಿದೆ. ಕನಿಷ್ಟ ೧೦ ಲಕ್ಷ ಇರಿಸಬೇಕು. ಸಚಿವರ ಮೂಲಕ ಸುಳ್ಯ ನ.ಪಂಗೆ ವಿಶೇಷ ಅನುದಾನ ತಂದು ಅಭಿವೃದ್ದಿಗೆ ಒತ್ತು ನೀಡಬೇಕು. ಎಂದು ವೆಂಕಪ್ಪ ಗೌಡ ಒತ್ತಾಯಿಸಿದರು. ಅದಕ್ಕುತ್ತರಿಸಿದ ಅಧ್ಯಕ್ಷರು ವಾರ್ಡ್‌ನ ಅಗತ್ಯ ಕೆಲಸಗಳ ಪಟ್ಟಿ ತಯಾರಿಸಿ ಕೊಟ್ಟರೆ ತಲಾ ರೂ. ೨೦ ಲಕ್ಷ ನೀಡಲಾಗುವುದು ಎಂದರು. ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ ಈ ಬಜೆಟ್ ಸಮನ್ವಯ ಕೊರತೆಯಿಂದ ಕಾಡಿದೆ. ಅಧಿಕಾರಿಗಳು ಈ ಬಜೆಟ್ ತಯಾರು ಮಾಡಿದ್ದಾರೆ. ಪ್ರತಿ ವಾರ್ಡಿಗೆ ೧೦ ಲಕ್ಷ ರೂ ಅನುದಾನ ನೀಡಲೇಬೇಕು ಎಂದರು. ಹೆಚ್ಚಿನ ಅನುದಾನ ಕುಡಿಯುವ ನೀರು, ವಿದ್ಯುತ್, ಮತ್ತು ತ್ಯಾಜ್ಯ ನಿರ್ವಹಣೆಗೆ ಖರ್ಚಾಗುತ್ತಿದೆ. ಕಟ್ಟಡಗಳ ಬಾಡಿಗೆ, ನೀರಿನ ಶುಲ್ಕ, ಪುರಭವನದ ಬಾಡಿಗೆ ಇತ್ಯಾದಿ ನಿರೀಕ್ಷಿಸಿದಷ್ಟು ವಸೂಲಾಗುತ್ತಿಲ್ಲ. ಅದನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಆದಾಯ ಕ್ರೋಢೀಕರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದರು ನಗರದಲ್ಲಿ ಮತ್ತೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಕೊಡುತ್ತಿರುವ ಅಂಗಡಿಗಳ ಮೇಲೆ ಕ್ರಮ ಜರಗಿಸಲು ಅಧಿಕಾರಿಗಳು ಉದಾಸೀನ ಮಾಡುತ್ತಿರುವುದು ಕಂಡುಬರುತ್ತಿದೆ. ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ನ.ಪಂ. ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ದನಾಯ್ಕ್, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ನ.ಪಂ. ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.