ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೋತ್ಸವ

ಸುಳ್ಯ, ಜ.೧೧- ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಶ್ರೀದೇವರ ಜಾತ್ರೋತ್ಸವು ವಿಜೃಂಭಣೆಯಿಂದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ದಾಮೋದರ ತಂತ್ರಿಗಳವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ದೊಡ್ಡ ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಸಾಕ್ಷಿಯಾದರು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ, ಅನುವಂಶಿಕ ಆಡಳಿತ ಮೋಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ಎ.ಒ.ಎಲ್.ಇ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್, ಸವಣೂರು ಸೀತಾರಾಮ ರೈ, ಎಂ.ಬಿ.ಸದಾಶಿವ, ಜೀರ್ಣೋದ್ದಾರೆ ಸಮಿತಿಯ ಸದಸ್ಯರಾದ ಲಿಂಗಪ್ಪ ಗೌಡ ಕೇರ್ಪಳ, ಎಂ.ಮೀನಾಕ್ಷಿ ಗೌಡ, ಎ.ರಮೇಶ ಬೈಪಡಿತ್ತಾಯ, ಎನ್.ಜಯಪ್ರಕಾಶ್ ರೈ ಹಾಗೂ ಕೃಪಾಶಂಕರ ತುದಿಯಡ್ಕ, ವೀರಕೇಸರಿ ಕರಣಿಕರು, ಗಿರಿಜಾಶಂಕರ ತುದಿಯಡ್ಕ, ಕಮಲಾಕ್ಷಿ ಟೀಚರ್ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ರಾತ್ರಿ ಕಲ್ಕುಡ ದೈವಗಳ ಭಂಡಾರ ಬಂದ ಬಳಿಕ ಶ್ರೀ ಚೆನ್ನಕೇಶವ ದೇವರ ವೈಭವದ ರಥೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಜ.೧೧ ರಂದು ಬೆಳಿಗ್ಗೆ ಆರಾಟ ಬಾಗಿಲು ತೆಗೆಯುವುದು, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಕಟ್ಟೆ ಪೂಜೆ, ಧ್ವಜಾವರೋಹಣ, ಜ.೧೨ ರಂದು ಮಧ್ಯಾಹ್ನ ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತ ಜಾತ್ರೆ:ಕೊರೋನಾ ಮಹಾಮಾರಿಯಿಂದ ಈ ಭಾರಿಯ ಸುಳ್ಯ ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿತ್ತು. ಜಾತ್ರೆ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನಗಳು ಈ ಬಾರಿ ಇರಲಿಲ್ಲ. ರಥಬೀದಿಯ ಎರಡು ಬದಿಯಲ್ಲಿ ಸಾಲುಗಟ್ಟಿ ಇರುತ್ತಿದ್ದ ಸಂತೆ ಮಳಿಗೆಗಳು ಈ ಬಾರಿ ಕಾಣ ಸಿಗಲೇ ಇಲ್ಲ. ಸಂತೆ ಮಳಿಗೆಗಳನ್ನು ಹಾಕಲು ಆರೋಗ್ಯ ಇಲಾಖೆ ಮತ್ತು ಸುಳ್ಯ ನಗರ ಪಂಚಾಯಿತಿಯ ಪರವಾನಿಗೆ ಇಲ್ಲದೇ ರಥ ಸಂಚಾರಿಸುವ ಬೀದಿ ಖಾಲಿಯಾಗಿತ್ತು.