ಸುಳ್ಯ ಚೆನ್ನಕೇಶವನಿಗೆ ವೈಭವದ ರಥೋತ್ಸವ

ಸುಳ್ಯ, ಜ.೧೨- ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶ್ರೀ ಚೆನ್ನಕೇಶವ ದೇವರ ವೈಭವದ ರಥೋತ್ಸವ ನಡೆಯಿತು. ನೆರೆದ ಸಾವಿರಾರು ಮಂದಿ ಈ ಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡರು.

ದೇವಸ್ಥಾನಕ್ಕೆ ಕಲ್ಕುಡ ಭಂಡಾರ ಆಗಮಿಸಿದ ಬಳಿಕ ವಿಶೇಷ ಪೂಜೆ ಮತ್ತು ಉತ್ಸವ ಬಲಿ ನಡೆದು ಚೆನ್ನಕೇಶವ ದೇವರನ್ನು ರಥದಲ್ಲಿ ಕುಳ್ಳಿರಿಸಲಾಯಿತು. ರಥದಲ್ಲಿ ವಿಶೇಷ ಪೂಜೆಯ ಬಳಿಕ ರಥವು ರಥಬೀದಿಯಲ್ಲಿ ಸಾಗಿತು. ಕಲ್ಕುಡ ದೈವ ಮತ್ತು ಕಾನತ್ತಿಲ ಉದ್ರಾಂಡಿ ದೈವದ ಕೋಲಗಳು ರಥೋತ್ಸವದ ಜೊತೆಯಲ್ಲಿ ಆಗಮಿಸಿತು. ಭಕ್ತರ ಮುಗಿಲು ಮುಟ್ಟಿದ ಉದ್ಘಾರದ ಮಧ್ಯೆ ರಥಬೀದಿಯಲ್ಲಿ ಸಾಗಿ ಬಂದ ರಥವು ಮುಖ್ಯ ರಸ್ತೆಯ ದ್ವಾರದ ಬಳಿಯ ಕಟ್ಟೆಯ ಬಳಿಗೆ ಆಗಮಿಸಿತು. ಚೆನ್ನಕೇಶವ ದೇವರನ್ನು ರಥದಿಂದ ಇಳಿಸಿ ಶೃಂಗರಿಸಿದ್ದ ಕಟ್ಟೆಯಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆ ನಡೆದು ಪ್ರಸಾದ ವಿತರಿಸಿದ ಬಳಿಕ ದೇವರು ರಥದಲ್ಲಿ ದೇವಾಲಯಕ್ಕೆ ಹಿಂತಿರುಗಿತು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸದಸ್ಯರಾದ ಲಿಂಗಪ್ಪ ಗೌಡ, ಎನ್.ಎ.ರಾಮಚಂದ್ರ, ಎಂ.ಮೀನಾಕ್ಷಿ ಗೌಡ ಮತ್ತಿತರರು ಉಪಸ್ಥಿತರಿದ್ದರು.

Spread the love