ಸುಳ್ಯ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತ

ಸುಳ್ಯ, ಡಿ.೨೮- ಕೋವಿಡ್ ಆತಂಕದ ನಡುವೆಯೂ ಸುಳ್ಯ ತಾಲೂಕಿನ ಗ್ರಾಮೀಣ ಭಾಗದ ಜನರು ಉತ್ಸಾಹದಿಂದ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದು, ಸುಳ್ಯ ತಾಲೂಕಿನ ೨೫ ಗ್ರಾಮಗಳ ೨೭೬ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ  ೮೦.೫೪ ಶೇ ಮತದಾನವಾಗಿ ಉತ್ತಮ ಫಲಿತಾಂಶ ದಾಖಲಾಗಿದೆ.

ಸುಳ್ಯ ತಾಲೂಕಿನಾದ್ಯಂತ ಶಾಂತಿಯುತ ಮತದಾನವಾಗಿದ್ದು, ತಾಲೂಕಿನ ಒಟ್ಟು ೮೯,೪೨೭ ಮತದಾರರ ಪೈಕಿ  ೭೧೯೩೪ ಮಂದಿ ಮತ ಚಲಾಯಿಸಿದ್ದಾರೆ. ಅದರಲ್ಲಿ ಪುರುಷ ಮತದಾರ ೩೬೧೮೬ ಹಾಗೂ ಮಹಿಳಾ ಮತದಾರ ೩೫೭೪೮ ಮತ ಚಲಾವಣೆಯಾಗಿದೆ.

ಬೆಳಿಗ್ಗೆ ೭ ಗಂಟೆಯಿಂದಲೇ ನಾನಾ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಬೂತ್ ಕೇಂದ್ರಗಳ ಹೊರಗೆ ನಿಗದಿ ಪಡಿಸಿದ ಜಾಗದಲ್ಲಿ ಅಭ್ಯರ್ಥಿಗಳು ನಿಂತು ಮತದಾರರೊಂದಿಗೆ ಮಾತನಾಡುತ್ತಿರುವುದು ಕಂಡುಬಂತು. ತಾಲೂಕಿನ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರ ಜೊತೆಗೂಡಿ ಸ್ಯಾನಿಟೈಸರ್ ಒದಗಿಸಿ ಥರ್ಮಲ್ ಸ್ಕ್ಯಾನರ್ ಮೂಲಕ ತಾಪಮಾನ ಮಾಡಿ ಮತದಾರರನ್ನು ಮತ ಚಲಾವಣೆಗೆ ಬಿಡುತ್ತಿದ್ದದು ಸಾಮಾನ್ಯವಾಗಿತ್ತು.

ಮತದಾನ ವ್ಯವಸ್ಥಿತವಾಗಿ ನಡೆಯಲು ತಹಸೀಲ್ದಾರ್ ವೇದವ್ಯಾಸ್ ಮುತಾಲಿಕ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎನ್. ಭವಾನಿಶಂಕರ್, ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ವಿವಿಧ ಸೆಕ್ಟರ್ ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳು ತಾಲೂಕಿನ ಹಲವು ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು. ಸುಳ್ಯ ಶಾಸಕ ಎಸ್.ಅಂಗಾರ ದೊಡ್ಡತೋಟ ಸ.ಹಿ.ಪ್ರಾ ಶಾಲೆಯ ಮೂರನೇ ವಾರ್ಡಿನ ಮತಗಟ್ಟೆಯಲ್ಲಿ ಬೆಳಿಗ್ಗೆ ೭ ಗಂಟೆಗೆ ಹಕ್ಕು ಚಲಾಯಿಸಿದರು. ಬಳಿಕ ಸುಳ್ಯ ಮತ್ತು ಕಡಬ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ತೆರಳಿ ಬೆಂಬಲಿತ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದರು.

ಚುನಾವಣೆ ಶಾಂತಿಯುತವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು ೫೮೪ ಮಂದಿಯನ್ನು ನಿಯೋಜನೆ ಮಾಡಲಾಗಿತ್ತು ಪ್ರತಿ ಮತಗಟ್ಟೆಗಳಿಗೆ ಅಧ್ಯಕ್ಷ ಅಧಿಕಾರಿ ಸಹಾಯಕ ಅಧ್ಯಕ್ಷ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ, ಮೂರನೇ ಮತಗಟ್ಟೆ ಅಧಿಕಾರಿ ಮತ್ತು ಡಿ ಗ್ರೂಪ್ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ ತೆರಳುವವರನ್ನು ಕರೆದೊಯ್ಯಲು ೧೮ ಬಸ್, ೧೮ ವ್ಯಾನ್, ೧೫ ಜೀಪು ಸೇರಿ ೫೧ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ಮತಗಟ್ಟೆಗಳು

ತಾಲೂಕಿನ ೨೫ ಗ್ರಾಮ ಪಂಚಾಯಿತಿಗಳಲ್ಲಿ ನಡೆದ  ಚುನಾವಣೆಗೆ  ೨೭ ಹೆಚ್ಚುವರಿ ಮತಗಟ್ಟೆಗಳು ಸೇರಿ  ಒಟ್ಟು ೧೩೨ ಮತಗಟ್ಟೆಗಳನ್ನು ತೆರೆಯಲಾಗಿತ್ತು ಇದರಲ್ಲಿ ೨೧ ಸೂಕ್ಷ್ಮ ಮತ್ತು ೧೦ ಅತಿ ಸೂಕ್ಷ್ಮ ಮತ್ತು ೧೦೧ ಸಾಮಾನ್ಯ ಮತಗಟ್ಟೆಗಳಿದ್ದವು. ಒಂದು ಸಾವಿರಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಗಳನ್ನು ವಿಭಜಿಸಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಈ ಕ್ರಮದಲ್ಲಿ ೧೦೫ ಬೂತ್‌ಗಳು ಇದ್ದಲ್ಲಿ ೨೭ ಹೆಚ್ಚುವರಿ ಮತಗಟ್ಟೆಗಳು ಸ್ಥಾಪಿಸಿ ಮತಗಟ್ಟೆಗಳ ಸಂಖ್ಯೆ ೧೩೨ಕ್ಕೆ ಏರಿಸಿ ಮತದಾನ ವ್ಯವಸ್ಥಿತವಾಗಿ ನಡೆಯಲು ಯೋಜನೆ ರೂಪಿಸಲಾಗಿತ್ತು.

ಅಭ್ಯರ್ಥಿಗಳ ನಡುವೆ ಚಕಮಕಿ:

ಮಂಡೆಕೋಲು ಗ್ರಾಮದ ಪೇರಾಲಿನಲ್ಲಿ ಬೂತ್‌ನ ಹೊರಗಡೆ ಟೇಬಲ್ ಹಾಕುವ ವಿಚಾರದಲ್ಲಿ ಬಿಜೆಪಿ ಮತ್ತು ಬಂಡಾಯ ಅಭ್ಯರ್ಥಿಗಳ ಮಧ್ಯೆ ಚಕಮಕಿ ನಡೆದ ಘಟನೆ ವರದಿಯಾಗಿದೆ.

ಕಂಟ್ರೋಲ್ ರೂಂ: ಗ್ರಾಮ ಪಂಚಾಯಿತಿ ಚುನಾವಣೆಯ ಮಾಹಿತಿಯನ್ನು ದಾಖಲಿಸಿಕೊಳ್ಳುವ ಸಲುವಾಗಿ ಸುಳ್ಯದ ನೆಹರೂ ಸ್ಮಾರಕ ಪದವಿ ಕಾಲೇಜಿನಲ್ಲಿ  ಕಂಟ್ರೋಲ್ ರೂಂನ್ನು ತೆರೆಯಲಾಗಿತ್ತು. ಪ್ರತಿ ೨ ಗಂಟೆಗೊಮ್ಮೆ ಮಾಹಿತಿಗಳನ್ನು ನೀಡಲಾಗುತ್ತಿತ್ತು.

೬೩೬  ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ಸುಳ್ಯ ತಾಲೂಕಿನ ೨೫ ಗ್ರಾಮ ಪಂಚಾಯಿತಿಗಳ ೨೭೬ ಸ್ಥಾನಗಳಿಗೆ ಮತದಾನ ನಡೆಯಿತು. ೨೭೬ ಸ್ಥಾನಗಳಲ್ಲಿ ಒಟ್ಟು ೬೩೬ ಅಭ್ಯರ್ಥಿಗಳು ಸ್ಪರ್ಧಿಸಿದ್ದು,  ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆಗಳಲ್ಲಿ ಭದ್ರವಾಗಿದೆ. ೨೮೨ ಸದಸ್ಯ ಸ್ಥಾನಗಳಲ್ಲಿ ೬ ಮಂದಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.