ಸುಳ್ಯದ ಜ್ಯುವೆಲ್ಲರಿಗೆ ನುಗ್ಗಿದ ಕಳ್ಳರು-ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಸುಳ್ಯ ,ಏ.೨-ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್‌ಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಬುಧವಾರ ರಾತ್ರಿ ನಡೆದಿದೆ.
ಗುರುವಾರ ಮುಂಜಾನೆ ಸ್ಥಳೀಯ ಪೇಪರ್ ಅಂಗಡಿಯವರು ಚಿನ್ನದ ಅಂಗಡಿಗೆ ಪತ್ರಿಕೆ ಹಾಕುವಾಗ ಬೀಗ ಒಡೆದಿರುವುದು ಕಂಡುಬಂತು. ವಿಷಯ ತಿಳಿದು ಅಂಗಡಿ ಮಾಲಕರು , ಪೋಲೀಸರು ಬಂದು ಬಾಗಿಲು ತೆರೆದು ಪರಿಶೀಲಿಸಿದಾಗ ಚಿನ್ನಾಭರಣ, ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ. ಸುಮಾರು ೫೦ ಸಾವಿರ ನಗದು ಮತ್ತು ೭.೫ ಲಕ್ಷಕ್ಕೂ ಅಧಿಕ ಮೊತ್ತದ ೧.೮೦ ಗ್ರಾಂ ಚಿನ್ನ ಕಳವಾಗಿರುವುದು ಗೊತ್ತಾಗಿದೆ. ಬೆಳ್ಳಿಯ ವಸ್ತುಗಳು ಕಳವು ಆಗಿದೆ. ಇದರ ಜೊತೆಗೆ ಸಿಸಿ ಕ್ಯಾಮರ ಡಿ.ವಿ.ಆರ್.ಬಾಕ್ಸ್ ಸಹಿತ ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಹೇಳಲಾಗಿದೆ. ಅಂಗಡಿ ಒಳಗಿನ ಮತ್ತೊಂದು ಕಡೆ ೩ ಲಕ್ಷ ರೂ ಇತ್ತು. ಇದು ಕಳ್ಳರ ಕೈಗೆ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಕಳವು ನಡೆದ ಸಮಯ ಮಧ್ಯರಾತ್ರಿ ೨ ಗಂಟೆಯಿಂದ ೪ ಗಂಟೆ ಒಳಗೆ ನಡೆದಿದೆ ಎಂದು ತಿಳಿದು ಬಂದಿದೆ.
ಪುತ್ತೂರಿನಲ್ಲಿ ಚಿನ್ನದ ಅಂಗಡಿಗೆ ನುಗ್ಗಿ ಕಳವು ಗೈದ ಘಟನೆಯ ಬಳಿಕ ಸುಳ್ಯ ಪೋಲಿಸರು ಸುಳ್ಯದ ಚಿನ್ನದ ಮಳಿಗೆಗಳಿಗೆ ತೆರಳಿ ಸೂಚನೆಗಳನ್ನು ಕೊಟ್ಟಿದ್ದರು, ಲಾಕರ್ ವ್ಯವಸ್ಥೆ, ಸಿಸಿ ಕ್ಯಾಮರಾ, ಬಾಗಿಲುಗಳ ಮೂಲಕ ಭದ್ರತೆ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು
ಸುಳ್ಯ ಪೋಲಿಸರು ಕೇಸು ದಾಖಲಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು ಸ್ಥಳಕ್ಕೆ ಡಿವೈಎಸ್‌ಪಿ ಡಾ. ಕುಮಾರಿ ಗಾನಾ, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಠಾಣಾಧಿಕಾರಿ ಹರೀಶ್ ಕುಮಾರ್ ಎಂ.ಆರ್, ಬೆರಳಚ್ಚು ತಜ್ಞರು, ಶ್ವಾನದಳ ಬಂದು ಸ್ಥಳ ಪರಿಶೀಲನೆ ನಡೆಸಿದರು.