ಸುಳ್ಯದಲ್ಲಿ ಸಮಯ ಮೀರಿದರೂ ಮನೆ ಸೇರದ ಸಾರ್ವಜನಿಕರು- ರಸ್ತೆಗಿಳಿದ ತಹಸೀಲ್ದಾರ್ ಕಠಿಣ ಕ್ರಮದ ಎಚ್ಚರಿಕೆ

ಸುಳ್ಯ, ಜೂ.೯- ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಅಗತ್ಯ ವಸ್ತು ಖರೀದಿಗೆ ಬೆಳಿಗ್ಗೆ ೯ ಗಂಟೆಯವರೆಗೆ ಅವಕಾಶ ನೀಡಲಾಗಿದ್ದು, ೧೦ ಗಂಟೆಯ ಒಳಗೆ ಮನೆ ಸೇರಬೇಕೆಂಬ ಆದೇಶ ಇದ್ದರೂ ಸುಳ್ಯ ಸೇರಿದಂತೆ ಜಿಲ್ಲೆಯಲ್ಲಿ ೧೦ ರ ನಂತರವೂ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ.ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ರಿಗೆ ಸೂಚನೆ ನೀಡಿದ್ದು, ಮಂಗಳವಾರ ಸುಳ್ಯದಲ್ಲಿ ತಹಸೀಲ್ದಾರ್ ಅನಿತಾಲಕ್ಷ್ಮಿಯವರು ರಸ್ತೆಗೆ ಇಳಿದು ಅನಗತ್ಯ ಓಡಾಡುತ್ತಿರುವರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಸುಳ್ಯದ ಜ್ಯೋತಿಸರ್ಕಲ್, ಗಾಂಧಿನಗರ, ರಥಬೀದಿ, ವಿವೇಕಾನಂದ ಸರ್ಕಲ್ ಬಳಿ ಪೊಲೀಸ್ ಕಾವಲು ಇದೆ. ಆದರೂ ಜನರು ಅತ್ತಿಂದಿತ್ತ ಓಡಾಡುತ್ತಿದ್ದಾರೆ. ತಹಸೀಲ್ದಾರ್ ಅನಿತಾಲಕ್ಷ್ಮಿಯವರು ೧೦ ಗಂಟೆಯಿಂದ ತಮ್ಮ ತಂಡದ ಜೊತೆ ಸುಳ್ಯದ ಚೆಕ್‌ಪೋಸ್ಟ್‌ಗಳಿಗೆ ಹೋಗಿ ಸಮಯ ಮೀರಿದ ಬಳಿಕ ಓಡಾಡುವ ವಾಹನ ಸವಾರರನ್ನು ತಡೆದು ಪ್ರಶ್ನಿಸುತ್ತಿದ್ದರು. ಇಂದು ಎಚ್ಚರಿಕೆ ನೀಡುತ್ತಿದ್ದೇವೆ. ನಾಳೆಯಿಂದ ೧೦ರ ನಂತರ ಓಡಾಡುವುದು ಕಂಡರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ವಾಹನ ಸವಾರರಿಗೆ ತಹಶೀಲ್ದಾರರಿಗೆ ಎಚ್ಚರಿಕೆ ನೀಡಿದರು.