ಸುಳ್ಯದಲ್ಲಿ ವರ್ಷದ ಪ್ರಥಮ ಗಾಳಿ ಮಳೆಗೆ ಅಪಾರ ಹಾನಿ

ಸುಳ್ಯ, ಮಾ.೨೬-ಸುಳ್ಯ ತಾಲೂಕಿನ ಎಲ್ಲೆಡೆ ಬುಧವಾರ ಸಂಜೆ ವರ್ಷದ ಪ್ರಥಮ ಗಾಳಿ ಮಳೆಗೆ ತಾಲೂಕಿನ ಎಲ್ಲೆಡೆ ಅಪಾರ ಪ್ರಮಾಣದಲ್ಲಿ ಅಸ್ತಿಪಾಸ್ತಿಗೆ ಹಾನಿಯಾಗಿದೆ.
ತಾಲೂಕಿನ ಚೊಕ್ಕಾಡಿಯ ಶೇಡಿಕಜೆ ಬಳಿ ಎಚ್. ಟಿ ಲೈನ್ ಮೇಲೆ ಮರಬಿದ್ದಿದೆ. ಪಾಂಡಿಪಾಲಿನಲ್ಲಿ ವಿದ್ಯುತ್ ಲೈನ್ ಮೇಲೆ ಮರಬಿದ್ದು ಕಂಬ ರಸ್ತೆಗೆ ಬಿದ್ದು ರಸ್ತೆ ಒಂದು ಗಂಟೆ ಬ್ಲಾಕ್ ಆಗಿತ್ತು. ಕಜೆಮೂಲೆ ಎಂಬಲ್ಲಿ ರಬ್ಬರ್ ಕೂಪೊಂದರ ಒಳಗೆ ಎಚ್ ಟಿ ಲೈನ್ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಮುರಿದಿದೆ. ಚೊಕ್ಕಾಡಿ ಭಾಗದಲ್ಲಿ ಗಾಳಿಗೆ ತೆಂಗಿನ ಮರ, ಅಡಿಕೆ ಮರಗಳು,ರಬ್ಬರ್ ಗಿಡಗಳು ಮುರಿದು ಬಿದ್ದಿವೆ. ವೆಂಕಟ್ರಮಣ ಭಟ್ ಪವನ ಮುಂಡುಗಾರು, ದುಗ್ಗಪ್ಪ ಗೌಡ ಪಾಂಡಿಪಾಲು, ಮಂಜುನಾಥ ಭಟ್ ಶೇಡಿಕಜೆ, ಶೇಷಪ್ಪ ಗೌಡ ಕಜೆಮೂಲೆ, ದೇವಣ್ಣ ಗೌಡ, ಬಾಲಕೃಷ್ಣ, ಹರಿಪ್ರಸಾದ್ ರೈ ಶೇಣಿ, ಮಾದವ ಗೌಡ ಪೂಜಾರಿಮನೆ, ಇನ್ನೂ ಹಲವರಿಗೆ ಅಡಿಕೆ, ತೆಂಗು ಮರಗಳು ಮುರಿದು ಬಿದ್ದು ಅಪಾರ ನಷ್ಟ ಉಂಟಾಗಿದೆ. ಮೆಸ್ಕಾಂ ನವರು ವಿದ್ಯತ್ ಲೈನ್ ದುರಸ್ತಿಯಲ್ಲಿ ತೊಡಗಿದ್ದಾರೆ.
ದುಗಲಡ್ಕ ದೊಡ್ಡತೋಟ ಪರಿಸರದಲ್ಲಿ ಕೂಡ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ದುಗ್ಗಲಡ್ಕದಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿದೆ,ಅಡಿಕೆ,ರಬ್ಬರ್, ತೆಂಗಿನ ಮರ ಧರಾಶಾಹಿಯಾಗಿದೆ.ಅಂಗಡಿ ಮುಂಗಟ್ಟುಗಳ ಶೀಟ್ ಗಾಳಿಗೆ ಹಾರಿ ಹೋಗಿದೆ.ಕೆಲವು ಮನೆಗಳಿಗೂ ಹಾನಿಯಾಗಿದೆ.
ದುಗಲಡ್ಕದ ಗಿರಿಜಾ ಎಂಬವರ ತೆಂಗಿನ ಮರವೊಂದು ಬುಡದಿಂದಲೇ ಮುರಿದು ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಬಿದ್ದು,ರಸ್ತೆ ಬ್ಲಾಕ್ ಆಗಿದೆ. ದುಗ್ಗಲಾಯ ದೈವಸ್ಥಾನದ ಎದುರು ಮರದ ರೆಂಬೆ ಬಿದ್ದು ವಿದ್ಯುತ್ ಕಂಬ ಮುರಿದಿದೆ. ದುಗಲಡ್ಕದ ಅಂಗಡಿಗಳ ಎದುರಿನ ಶೀಟ್ ಗಾಳಿಗೆ ಹಾರಿ ಹೋಗಿದೆ.ಕೊಯಿಕುಳಿ,ಗೋಂಟಡ್ಕದಲ್ಲಿಯೂ ಮರದ ರೆಂಬೆಗಳು ರಸ್ತೆಗೆ ಬಿದ್ದಿದೆ. ದೊಡ್ಡತೋಟ ಭಾಗಗಳಲ್ಲಿ ಅಡಿಕೆ ತೋಟ, ಬಾಳೆ ಗಿಡಗಳು ಕೆಎಫ್‌ಡಿಸಿಯ ರಬ್ಬರ್ ತೋಟದ ಮರಗಳು ಧರಾಶಾಯಿಯಾಗಿದೆ.
ಕೇರ್ಪಡದಲ್ಲಿ ಗುರಿಯಡ್ಕ ಗಿರಿಜಾರವರ ಮನೆಯ ಮೇಲ್ಚಾವಣಿಗೆ ಹಲಸಿನ ಮರ ಬಿದ್ದು ಮನೆಯ ರೀಪು, ಪಕ್ಕಾಸು, ಹಂಚು ಪುಡಿಯಾಗಿ ಹಾನಿಯಾಗಿದೆ. ಸುಮಾರು ಹತ್ತು ಸಾವಿರದಷ್ಟು ನಷ್ಟ ಸಂಭವಿಸಿದೆ. ಎಡಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ, ಗ್ರಾಮಕರಣಿಕ ಬಸವರಾಜು, ಗ್ರಾಮ ಸಹಾಯಕ ನಾರಾಯಣ ನಾಯ್ಕ ಎಂಜೀರು, ಪಂ. ಸದಸ್ಯೆ ರೇವತಿ ರಘುನಾಥ ಎಂಜೀರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.