ಸುಳ್ಯದಲ್ಲಿ ಭಾರಿ ಗಾಳಿ ಮಳೆ-ಹಲವು ಕಡೆ ಅಸ್ತಿಪಾಸ್ತಿಗೆ ಹಾನಿ

ಸುಳ್ಯ , ಮೇ.೧- ಸುಳ್ಯದಲ್ಲಿ .ಗುರುವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ಹಲವು ಕಡೆಗಳಲ್ಲಿ ಹಾನಿ ಸಂಭವಿಸಿದೆ. ಜಯನಗರ ಗಜಾನನ ಭಜನಾಮಂದಿರದ ಬಳಿ ಇರುವ ರಾಧಾಕೃಷ್ಣ ಕೋನಾರ್ಕ್ ಎಂಬುವವರ ಮನೆಯ ಮೇಲೆ ಬರೆ ಜರಿದು ಸುಮಾರು ಐವತ್ತು ಸಾವಿರ ರೂಪಾಯಿಗಳ ನಷ್ಟ ಸಂಭವಿಸಿದೆ. ಗುಡ್ಡಜರಿದ ಸ್ಥಳದಲ್ಲಿ ಮೇಲ್ಬಾಗದಲ್ಲಿರುವ ಮಹಮ್ಮದ್ ಬಾಳೆಮಕ್ಕಿ ಎಂಬವರ ಮನೆ ಅಪಾಯದ ಸ್ಥಿತಿಯಲ್ಲಿ ಇದ್ದು ಸ್ಥಳೀಯ ನಿವಾಸಿಗಳು ಆತಂಕದಲ್ಲಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳಿಯ ನಗರ ಪಂಚಾಯಿತಿ ಸದಸ್ಯೆ ಶಿಲ್ಪಾ ಸುದೇವ್, ಸುಳ್ಯ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಂತೋಡಿನಲ್ಲಿ ಗಾಳಿಮಳೆಗೆ ೧೫ ವಿದ್ಯುತ್ ಕಂಬಗಳು ಧರೆಗುರುಳಿದ್ದು ಕೃಷಿಕರ ಅಡಿಕೆ ಮರಗಳು ಬಿದ್ದು ಅಪಾರ ಹಾನಿಯಾಗಿದೆ.
ಶಾಂತಿನಗರದಲ್ಲಿ ಮರ ಬಿದ್ದು ಮನೆಗೆ ಹಾನಿ
ಮಳೆ ನಿಂತ ಮೇಲೆ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಮುರಿದು ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಶಾಂತಿನಗರ ನಿವಾಸಿ ವಿಜಯಲಕ್ಷ್ಮಿ ಎಂಬವರ ಮನೆಯ ಮೇಲೆ ಬೃಹತ್ ಗಾತ್ರದ ಮರವೊಂದು ಬುಡಸಮೇತ ಮಗುಚಿ ಬಿದ್ದಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ. ಮನೆಯಲ್ಲಿದ್ದ ಇಬ್ಬರು ಯುವತಿಯರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. ಸ್ಥಳಿಯರು ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಯಿತು.
ಜಾಲ್ಸೂರು ಗ್ರಾಮದ ಕೋನಡ್ಕಪದವಿನ ಶಿವಪ್ರಸಾದ್ ಅವರ ಮನೆಯ ನೀರಿನ ಟ್ಯಾಂಕ್ ಹಾಗೂ ಸಿಮೆಂಟ್ ಶೀಟಿನ ಮೇಲೆ ಮರಬಿದ್ದು ಹಾನಿ ಸಂಭವಿಸಿದೆ. ಪರಿಣಾಮ ನೀರಿನ ಟ್ಯಾಂಕ್, ಪೈಪು ಹಾಗೂ ಸಿಮೆಂಟ್ ಶೀಟ್ ಗೆ ಹಾನಿ ಸಂಭವಿಸಿದ್ದು ಅಂದಾಜು ಹತ್ತು ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.