ಸುಲ್ತಾನಿಪುರ-ಭಾವಿಹಾಳ್ ರಸ್ತೆ ಕಾಮಗಾರಿಗೆ ೮ ಕೋಟಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಡಿ.೪: ತಾಲೂಕಿನ ಸುಲ್ತಾನಿಪುರದಿಂದ ಭಾವಿಹಾಳ್ ಗ್ರಾಮದವರಿಗೆ ರಸ್ತೆ ಕಾಮಗಾರಿಗೆ ೮ ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚಿನ್ನಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆದರ್ಶ ಗ್ರಾಮ ಯೋಜನೆಯಡಿ ನಿರ್ಮಿತಿ ಕೇಂದ್ರದಿAದ ೨೨ ಲಕ್ಷ ರೂ. ವೆಚ್ಚದಲ್ಲಿ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ತಾಲೂಕಿನ ಸುಲ್ತಾನಿಪುರ-ಗಂಗನಕಟ್ಟೆ-ಚಿನ್ನಸಮುದ್ರ-ನರಗನಹಳ್ಳಿ- ಹೊನ್ನಾಯಕನಹಳ್ಳಿ-ಭಾವಿಹಾಳ್ ಗ್ರಾಮಗಳ ಸಂಪರ್ಕ ಕಲ್ಪಿಸುವ ಶಾಶ್ವತ ರಸ್ತೆ ಕಾಮಗಾರಿಗೆ ಈ ಭಾಗದ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಇತ್ತು. ಈಗ ರಾಜ್ಯ ಸರ್ಕಾರ ಈ ಭಾಗದ ರಸ್ತೆ ಕಾಮಗಾರಿಗೆ ಅನುದಾನ ನೀಡುತ್ತಿದ್ದು, ಹಣಕಾಸು ಇಲಾಖೆಯಿಂದ ಅನುಮೋದನೆ ನೀಡಿದ ಕೂಡಲೇ ಟೆಂಡರ್ ಕರೆದು ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಬಿಸಿಯೂಟ, ಸಮವಸ್ತç, ಪಠ್ಯ ಪುಸ್ತಕ ಸೇರಿದಂತೆ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಮೂಲಕ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಪೋಷಕರು ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ನೇರ್ಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಬಾಯಿ, ಸದಸ್ಯ ರಾಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರಪ್ಪ, ಎಂಜಿನಿಯರ್ ಶಿವಕುಮಾರ್, ಮುಖಂಡರಾದ ಮಂಜ ನಾಯ್ಕ್, ಶೇಖರ್ ನಾಯ್ಕ್, ಸುರೇಶ್ ನಾಯ್ಕ್, ರೇವಣಸಿದ್ದಪ್ಪ ಸೇರಿದಂತೆ ಇನ್ನಿತರರಿದ್ದರು.