ಸುಲ್ತಾನಪುರ ಜಿಲೆಟಿನ್ ಪ್ರಕರಣ: ತನಿಖೆ ನಂತರ ಕ್ರಮ

ಬೀದರ.ಮಾ.25: ತಾಲೂಕಿನ ಸುಲ್ತಾನಪುರ ಬಳಿ ಗಣಿಗಾರಿಕೆ ಸ್ಥಳದಲ್ಲಿ 16 ಕ್ವಿಂಟಾಲ್ ಜಿಲೆಟಿನ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ. ತನಿಖೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಜಿಲೆಟಿನ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಕೆ.ಕನ್ಸ್‍ಟ್ರಕ್ಷನ್ ಮಾಲಿಕರು ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯು ಬೀದರ್ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದು, ಎಫ್‍ಐಆರ್ ದಾಖಲಾಗಿದೆ. ಜಿಲೆಟಿನ್ ಕಡ್ಡಿ, ಟಿಪ್ಪರ್ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಬೀದರ್ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ತಡೆಗಟ್ಟಲು ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ ಹಲವು ಕ್ರಮ ಕೈಗೊಂಡಿದೆ. 2019-20 ರಲ್ಲಿ 21 ಮೊಕದ್ದಮೆ ದಾಖಲಿಸಿ, 105 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. 2020-21 ನೇ ಸಾಲಿನಲ್ಲಿ 10 ಪ್ರಕರಣ ದಾಖಲಿಸಿ 43.07 ಲಕ್ಷರೂ.ದಂಡ ಸಂಗ್ರಹಿಸಲಾಗಿದೆ ಎಂದು ಸಚಿವ ನಿರಾಣಿ ತಿಳಿಸಿದ್ದಾರೆ.